ಹೊಸ ದಿಗಂತ ವರದಿ, ಮಂಗಳೂರು:
ಮಹಿಳೆಯರಿಗೆ ಮೀಸಲಾತಿ ನೀಡುವ ಹೆಸರಿನಲ್ಲಿ ಅಧಿವೇಶನ ಕರೆದು ವಂಚಿಸುವ ಬಿಜೆಪಿಯ ಪ್ರಯತ್ನ ವಿಫಲವಾಗಿದೆ. ವಿಶೇಷ ಅಧಿವೇಶನ ಕರೆದು ಬಿಜೆಪಿ ಮುಖಭಂಗ ಅನುಭವಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಕೇಂದ್ರ ಸರಕಾರ ಮಹಿಳೆಯರ ಹೆಸರಿನಲ್ಲಿ ಮೀಸಲಾತಿ ಮಸೂದೆ ಮಂಡಿಸಲು ಮುಂದಾಗಿ ವಂಚನೆ ಮಾಡಲು ಹೊರಟಿದೆ. ಮಹಿಳೆಯರಿಗೆ ವಾಸ್ತವದಲ್ಲಿ ವಿರೋಧ ಮಾಡಿರುವುದು ಬಿಜೆಪಿಯವರು. ಹಾಗೆಂದು ಮಹಿಳಾ ಮೀಸಲಾತಿಗೆ ಯಾರೂ ವಿರೋಧ ಇಲ್ಲ ಎಂದರು.
ಈ ಮಸೂದೆ 2023ರಲ್ಲಿ ಬಂದಾಗ ನಾವು ಸರ್ವಾನುಮತದಿಂದ ಒಪ್ಪಿಕೊಂಡಿದ್ದೆವು. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಬಗ್ಗೆ ತೀರ್ಮಾನ ಮಾಡಿದರೆ ನಾವು ಸ್ವಾಗತಿಸುತ್ತೇವೆ. ರಾಜ್ಯದ 224 ಕ್ಷೇತ್ರಗಳ ಪೈಕಿ ಶೇ.33ರಷ್ಟು ಮಹಿಳೆಯರಿಗೆ ಮೀಸಲಾತಿ ಕೊಟ್ಟರೆ ನಮಗೆ ಸಮಸ್ಯೆ ಇಲ್ಲ. ನಾವೆಲ್ಲರೂ ಮಸೂದೆಯ ಪರವಾಗಿ ಇದ್ದೇವೆ. ಈಗ ಕೆಲವು ಕಡೆ ಚುನಾವಣೆ ನಡೆಯುತ್ತಿದೆ. ಈ ಮಸೂದೆ ಹಿಂದೆಯೇ ಜಾರಿಗೆ ತಂದಿದ್ದರೆ ಚುನಾವಣೆಯಲ್ಲಿ ಶೇ. 33 ಸೀಟು ಮಹಿಳೆಯರಿಗೆ ಸಿಗುತ್ತಿತ್ತು. ಮಹಿಳೆಯರ ಹೆಸರಿನಲ್ಲಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ಕ್ಷೇತ್ರ ಪುನರ್ ವಿಂಗಡಣೆ ಮಾಡಬೇಕು ಎಂಬ ಹುನ್ನಾರ ಕೇಂದ್ರದ್ದು ಎಂದು ಹೇಳಿದರು.
ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಿನ ಭೀತಿ ಇಲ್ಲ. ಪಕ್ಷದಲ್ಲಿ ಕೈಗೊಳ್ಳಲಾದ ಕೆಲವು ಕ್ರಮಗಳಿಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಜಮೀರ್ ಅಹಮ್ಮದ್‌ರನ್ನು ಸಚಿವ ಸ್ಥಾನದಿಂದ ಇಳಿಸುವುದು ಕೇವಲ ಉಹಾಪೋಹ. ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಂ ಟಾರ್ಗೆಟ್ ಬಗ್ಗೆ ರಾಜಣ್ಣ ಹೇಳಿಕೆ ವಿಚಾರ ನನಗೆ ಗೊತ್ತಿಲ್ಲ. ಅದನ್ನು ರಾಜಣ್ಣ ಅವರ ಬಳಿಯೇ ಕೇಳಬೇಕು ಎಂದರು.
ಸ್ಥಳೀಯಾಡಳಿತ ಚುನಾವಣೆ ನಡೆಸುವ ಬಗ್ಗೆ ಈಗಾಗಲೇ ಪ್ರಕ್ರಿಯೆಗಳು ಆರಂಭವಾಗಿದೆ. ಹೈಕೋರ್ಟ್ ಆದೇಶ ಪ್ರಕಾರ ಜೂನ್ ಮೊದಲು ಚುನಾವಣೆ ನಡೆಸಬೇಕು. ಈಗಾಗಲೇ ಅದರ ಬಗ್ಗೆ ತಯಾರಿಗಳು ಆರಂಭವಾಗಿದೆ. ಸೆಪ್ಟೆಂಬರ್‌ನಲ್ಲಿ ಚುನಾವಣೆ ನಡೆಸಲು ಹೈ ಕೋರ್ಟ್ ಕಾಲಾವಕಾಶ ನೀಡಿದರೆ ಮಾಡುತ್ತೇವೆ. ಜೂನ್ ಒಳಗೆ ಮಾಡಬೇಕು ಎಂದರೆ ಅದಕ್ಕೂ ಸಿದ್ಧರಿದ್ದೇವೆ ಎಂದರು.



