August 17, 2026
Monday, August 17, 2026
spot_img

ಜೋಶ್ನಾ ಚಿನಪ್ಪ ದಾಖಲೆ ಬ್ರೇಕ್; ಜೂನಿಯರ್ ಸ್ಕ್ವಾಶ್ ವಿಶ್ವ ಚಾಂಪಿಯನ್ ಪಟ್ಟ ಗೆದ್ದ 18ರ ಹರೆಯದ ಅನಾಹತ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಯುವ ಸ್ಕ್ವಾಶ್ ದೀಪತಿ ಅನಾಹತ್ ಸಿಂಗ್ ಕ್ರೀಡಾ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಕೆನಡಾದ ನಿಯಾಗ್ರಾ-ಆನ್-ದಿ-ಲೆಕ್‌ನಲ್ಲಿ ನಡೆದ 2026ರ ವಿಶ್ವ ಜೂನಿಯರ್ ಸ್ಕ್ವಾಶ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ, ಈ ಗೌರವ ಪಾತ್ರರಾದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ 18 ವರ್ಷದ ಅನಾಹತ್ ಪಾತ್ರರಾಗಿದ್ದಾರೆ.

ನೇರ ಸೆಟ್‌ಗಳ ಭರ್ಜರಿ ಜಯ

ಜುಲೈ 25ರ ಶನಿವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಅನಾಹತ್ ಸಿಂಗ್, ದ್ವಿತೀಯ ಶ್ರೇಯಾಂಕದ ಈಜಿಪ್ಟ್‌ನ ಪ್ರಬಲ ಆಟಗಾರ್ತಿ ರುಕಯ್ಯಾ ಸಲೇಮ್‌ಗೆ ಯಾವುದೇ ಅವಕಾಶ ನೀಡಲಿಲ್ಲ. ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಅನಾಹತ್ 11-3, 11-7, 11-9 ರ ನೇರ ಸೆಟ್‌ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದರು.

ಜೋಶ್ನಾ ಚಿನಪ್ಪ ದಾಖಲೆ ಬ್ರೇಕ್

ಈ ಗೆಲುವು ಭಾರತೀಯ ಸ್ಕ್ವಾಶ್ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ಮೈಲಿಗಲ್ಲಾಗಿದೆ. ವಿಶ್ವ ಜೂನಿಯರ್ ಸ್ಕ್ವಾಶ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಇದುವರೆಗೆ ಯಾವುದೇ ಭಾರತೀಯ ಕ್ರೀಡಾಪಟು ಪ್ರಶಸ್ತಿ ಗೆದ್ದಿರಲಿಲ್ಲ. ಇದಕ್ಕೂ ಮುನ್ನ 2005ರಲ್ಲಿ ಭಾರತದ ಜೋಶ್ನಾ ಚಿನಪ್ಪ ಫೈನಲ್ ತಲುಪಿದ್ದೇ ಅತ್ಯುತ್ತಮ ಸಾಧನೆಯಾಗಿತ್ತು. ಈಗ ಅನಾಹತ್ ಆ ಸಾಧನೆಯನ್ನು ಮೀರಿಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಇದನ್ನೂ ಓದಿ:

ಈಜಿಪ್ಟ್‌ನ 13 ವರ್ಷಗಳ ಪ್ರಾಬಲ್ಯಕ್ಕೆ ಬ್ರೇಕ್

ಅನಾಹತ್ ಸಿಂಗ್ ಈ ಐತಿಹಾಸಿಕ ಜಯವು ಮಹಿಳಾ ಜೂನಿಯರ್ ಸ್ಕ್ವಾಶ್‌ನಲ್ಲಿ ಈಜಿಪ್ಟ್ ಹೊಂದಿದ್ದ ಸುದೀರ್ಘ ಏಕಸ್ವಾಮ್ಯವನ್ನು ಕೊನೆಗಾಣಿಸಿದೆ. 2011 ರಿಂದ ಸತತ 13 ಆವೃತ್ತಿಗಳಲ್ಲಿ ಈಜಿಪ್ಟ್‌ನ ಆಟಗಾರ್ತಿಯರೇ ಚಾಂಪಿಯನ್ ಆಗುತ್ತಿದ್ದರು. ಇದೀಗ ಅನಾಹತ್ ಈ ಸರಣಿಗೆ ಬ್ರೇಕ್ ಹಾಕಿದ್ದಾರೆ. ಅಷ್ಟೇ ಅಲ್ಲದೆ, 2010ರಲ್ಲಿ ಅಮೆರಿಕದ ಅಮಾಂಡಾ ಸೋಭಿ ಪ್ರಶಸ್ತಿ ಗೆದ್ದ ಬಳಿಕ, ಈ ವಿಶ್ವ ಜೂನಿಯರ್ ಚಾಂಪಿಯನ್ ಪಟ್ಟ ಅಲಂಕರಿಸಿದ ಮೊದಲ ಈಜಿಪ್ಟ್‌ಯೇತರ ಆಟಗಾರ್ತಿ ಎಂಬ ಹೆಗ್ಗಳಿಕೆಯೂ ಅನಾಹತ್ ಪಾಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !