ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲಸದ ಅವಧಿ ಕುರಿತ ಮಾತನಾಡಿದ್ದ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಇಂದು ತಮ್ಮ ನಿಲುವಿನ ಬಗ್ಗೆ ಸ್ಪಷ್ಟೀಕರಣ ನೀಡಿದ್ದು ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದ್ದಾರೆ.
ದೇಶದ ಅಭ್ಯುದಯಕ್ಕಾಗಿ ಇಂದಿನ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದರು. ಆ ಬಗ್ಗೆ ಮತ್ತೆ ಮಾತನಾಡಿರುವ ಅವರು, ಯಾರು ಕೂಡ ಯಾವುದನ್ನೂ ಬೇರೆಯವರಿಗೆ ಹೇರಬಾರದು ಎಂದು ಸಲಹೆ ನೀಡಿದ್ದಾರೆ.
ಈಗ ಯಾರು ಕೂಡ ಇನ್ನೊಬ್ಬ ವ್ಯಕ್ತಿಯ ಮೇಲೆ ದೀರ್ಘ ಕೆಲಸದ ಸಮಯವನ್ನು ಹೇರಬಾರದು. ಇವು ಚರ್ಚೆಯ ವಿಷಯ ಅಲ್ಲ. ಆತ್ಮಾವಲೋಕನಕ್ಕೆ ಸಂಬಂಧಿಸಿದ ವಿಷಯಗಳು ಎಂದು ಹೇಳಿದ್ದಾರೆ.
ನಾನು ಬೆಳಗ್ಗೆ 6:20 ಕ್ಕೆ ಕಚೇರಿಗೆ ಹೋಗಿ ರಾತ್ರಿ 8:30 ಕ್ಕೆ ಹೊರಗೆ ಬರುತ್ತಿದ್ದೆ. ಅದು ಸತ್ಯ, ನಾನು ಅದನ್ನು ಮಾಡಿದ್ದೇನೆ. ನಾನು 40 ವರ್ಷ ವಯಸ್ಸಿನವನಿದ್ದಾಗ ಇಷ್ಟು ಸಮಯ ಕೆಲಸ ಮಾಡಿದ್ದೇನೆ. ಇದು ಚರ್ಚೆಗೆ ಒಳಪಡಿಸುವ ವಿಷಯ ಅಲ್ಲ. ನಿಮಗೆ ನೀವೇ ತೀರ್ಮಾನ ಮಾಡಬಹುದು. ನೀವು ಬಯಸಿದ್ದನ್ನು ಮಾಡಬಹುದು. ನೀವು ಅದನ್ನು ಮಾಡಬೇಕು, ನೀವು ಅದನ್ನು ಮಾಡಬಾರದು ಎಂದು ಯಾರೂ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜಾಗತಿಕವಾಗಿ ದೇಶವು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಬೇಕಾದರೆ ಭಾರತದ ಯುವಸಮುದಾಯವು ಕಠಿಣ ಪರಿಶ್ರಮ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು 78 ವರ್ಷದ ನಾರಾಯಣ ಮೂರ್ತಿ ಅವರು ಹೇಳಿದ್ದರು. ನಮ್ಮ ಯುವಕರು, ‘ಇದು ನನ್ನ ದೇಶ. ನಾನು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಬಯಸುತ್ತೇನೆ’ ಎಂದು ಹೇಳಬೇಕು ಎಂದಿದ್ದರು. ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.