Tuesday, March 28, 2023

Latest Posts

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ವಿಷಯದಲ್ಲಿ ರಾಜಕಾರಣ ಸಲ್ಲದು : ಸಿಎಂ ಬಸವರಾಜ ಬೊಮ್ಮಾಯಿ

ಹೊಸದಿಗಂತ ವರದಿ ಶಿವಮೊಗ್ಗ :

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ವಿಷಯದಲ್ಲಿ ಯಾರೂ ಕೂಡ ರಾಜಕಾರಣ ಬೆರಸಬಾರದು. ಇದನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಇದರಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಲುವಾಗಿ ಬುಧವಾರ ನಗರಕ್ಕೆ ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಖಾಸಗಿ ವಲಯದಲ್ಲಾದರೂ ಸರಿ ಆರಂಭಿಸಬೇಕೆಂಬ ಉದ್ದೇಶದಲ್ಲಿ ಉಕ್ಕು ಉತ್ಪಾದಕರ ಸಭೆ ಈ ವಾರದಲ್ಲಿ ಕರೆಯಲಾಗಿದೆ. ಅವರೊಂದಿಗೆ ಕಾರ್ಮಿಕ ಮುಖಂಡರು, ಸ್ಥಳೀಯ ಮುಖಂಡನ್ನು ಕರೆದು ಚರ್ಚಿಸಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳಿಸಲಾಗುತ್ತದೆ. ಕೇಂದ್ರ ಸಚಿವರ ಬಳಿ ನಿಯೋಗ ಕೂಡ ಹೋಗಲಾಗುತ್ತದೆ ಎಂದರು.

ಶರಾವತಿ ಮುಳುಗಡೆ ಸಂತ್ರಸ್ತರ ಭೂಮಿಗೆ ಹಕ್ಕುಪತ್ರ ಕೊಡುವ ಸಲುವಾಗಿ ಕೇಂದ್ರದ ಒಪ್ಪಿಗೆಗೆ ಕಳಿಸಲಾಗಿದೆ. ದಶಕಗಳ ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲಾಗುವುದು. ಈ ಹಿಂದೆಯೂ ಈ ಬಗ್ಗೆ ಭರವಸೆ ನೀಡಿದ್ದೇನೆ. ಕಾನೂನಿನ ಚೌಕಟ್ಟಿನಲ್ಲಿಯೇ ಸಮಸ್ಯೆ ಪರಿಹಾರದ ಮಾರ್ಗವನ್ನು ಹುಡುಕುತ್ತೇವೆ ಎಂದು ತಿಳಿಸಿದರು.

ಜಾತಿ ಆಧಾರಿತ ಹೇಳಿಕೆಗಳಿಗೆ ಉತ್ತರ ಕೊಡುವುದಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜಾತಿ ರಾಜಕಾರಣದ ಬಗ್ಗೆ ನನಗೆ ನಂಬಿಕೆ ಇಲ್ಲ. ಇದನ್ನು ಬಿಂಬಿಸುವುದು ಕೂಡ ಸರಿಯಲ್ಲ. ಜಾತಿಯ ಬಗ್ಗೆ ಯಾರೇ ಆಗಲಿ, ಮಾತನಾಡುವುದು ತಪ್ಪು. ಇದರಿಂದ ತೊಂದರೆಯೇ ವಿನಃ ಲಾ‘ವಂತೂ ಇಲ್ಲ ಎಂದರು.

ಮತದಾರರು ಪ್ರಭುದ್ಧರಾಗಿದ್ದಾರೆ, ಅಭಿವೃದ್ಧಿಯನ್ನು ನೋಡಿ ಮತ ನೀಡುತ್ತಾರೆಯೇ ಹೊರತು ಜಾತಿಯ ಆಧಾರದ ಮೇಲೆ ಅಲ್ಲ. ಜನರಿಗೆ ಜಾತಿಯ ಮೇಲೆ ಕಿಮ್ಮತ್ತೂ ಇಲ್ಲ, ಹೀಗೆ ಮಾತನಾಡುತ್ತಾ ನಮ್ಮನ್ನು ನಾವೇ ಕೆಳಮಟ್ಟಕ್ಕೆ ತಂದುಕೊಳ್ಳತ್ತೇವೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಟರ್ಕಿ ಭೂಕಂಪದಲ್ಲಿ ಕರ್ನಾಟಕದವರು ಸಿಲುಕಿರುವ ಬಗ್ಗೆ ಖಚಿತತೆ ಇಲ್ಲ. ಇಲ್ಲಿನವರ ಸಂಬಂಧಗಳು ಯಾರಾದರೂ ಇದ್ದರೆ ಮಾಹಿತಿ ನೀಡುವಂತೆ ಕೋರಲಾಗಿದೆ. ದೆಹಲಿಯಲ್ಲಿರುವ ಕರ್ನಾಟಕದ ಹೈಕಮೀಷನ್ ಈ ಬಗ್ಗೆ ನೋಡಿಕೊಳ್ಳುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!