ಹೊಸದಿಗಂತ ವರದಿ,ಕಾರವಾರ :
ರಾಜ್ಯದ ಪಾಲಿಗೆ ಇದೊಂದು ಅಭಿವೃದ್ಧಿ ಶೂನ್ಯ ಬಜೆಟ್. ಉತ್ತರ ಕನ್ನಡಕ್ಕೂ ಯಾವುದೆ ಗಮನಾರ್ಹ ಕೊಡುಗೆ ಇಲ್ಲದ ಬಜೆಟ್. ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಹೊರತಾದ ಬಜೆಟ್ ಇದಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿದ ಬಜೆಟ್ ಕುರಿತು ಪ್ರತಿಕ್ರಿಯಿಸಿದ್ದಾರೆ.
ಸರ್ಕಾರ ದಾಖಲೆ ಪ್ರಮಾಣದಲ್ಲಿ ಅಂದರೆ 1 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದೇ ದೊಡ್ಡ ಸಾಧನೆಯಾಗಿದೆ. ಇರುವ ಯೋಜನೆಗಳಲ್ಲೇ ತಿಪ್ಪೆ ಸಾರಿಸಿದ್ದು ಬಿಟ್ಟರೆ ಮತ್ತೇನೂ ಕೊಡುಗೆ ನೀಡಲಾಗಿಲ್ಲ. ನಮ್ಮ ಜಿಲ್ಲೆಗೆ ಹೇಳಿಕೊಳ್ಳುವಂತಹ ಯಾವುದೆ ಯೋಜನೆಯನ್ನು ಘೋಷಿಸಲಾಗಿಲ್ಲ.
ಅದರಲ್ಲೂ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರವನ್ನು ಈ ಬಜೆಟ್ ನಲ್ಲಿ ಪರಿಗಣಿಸಲೇ ಇಲ್ಲ. ವಿಮಾನ ನಿಲ್ದಾಣ ಆರಂಭಿಸಲಾಗುವುದು ಎಂಬ ಹಳೆಯ ಹೇಳಿಕೆಯ ಪುನರುಚ್ಛಾರಕ್ಕಷ್ಟೇ ಬಜೆಟ್ ಸೀಮಿತವಾಗಿದೆ.
ಆಡಳಿತ ಪಕ್ಷದ ಶಾಸಕರು, ಸಚಿವರು ನಮ್ಮ ಜಿಲ್ಲೆಯ, ಕ್ಷೇತ್ರದ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಘೋಷಣೆ ಮಾಡಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿಚಾರವನ್ನೇ ಕಾಂಗ್ರೆಸ್ ಕೈಬಿಟ್ಟಿದೆ. ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವ ವಿಚಾರವನ್ನೂ ಬಜೆಟ್ ನಲ್ಲಿ ಪ್ರಸ್ತಾಪ ಮಾಡಿಲ್ಲ. ಇದು ಉತ್ತರ ಕನ್ನಡ ಜಿಲ್ಲೆ ಹಾಗೂ ಕಾರವಾರ ಅಂಕೋಲಾ ಕ್ಷೇತ್ರಕ್ಕೆ ಮಾಡಿದ ಅನ್ಯಾಯವಾಗಿದೆ. ಇದೊಂದು ಜನ ವಿರೋಧಿ ಬಜೆಟ್ ಆಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.