ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಅಲ್ಪಸಂಖ್ಯಾತರು ಅಂದರೆ, ಮುಸ್ಲಿಂ ಕ್ರಿಶ್ಚಿಯನ್ ಸಮುದಾಯಕ್ಕೂ ಕೊಡುಗೆ ನೀಡಿದ್ದಾರೆ. ಇದರಿಂದ ಸಿಡಿದೆದ್ದಿರುವ ವಿಪಕ್ಷ ಬಿಜೆಪಿ ಹಾಗೂ ಹಿಂದು ಸಂಘಟನೆಗಳು ಸಿದ್ದರಾಮಯ್ಯ ಬಜೆಟ್ ವಿರುದ್ಧ ಕ್ರೋಶ ಹೊರಹಾಕುತ್ತಿವೆ.
ಇದರ ಬೆನ್ನಲ್ಲೇ ಈ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತಾಡಿದ ಸಿಎಂ ಸಿದ್ದರಾಮಯ್ಯ, 4,09,549 ಕೋಟಿ ರೂ. ಗಾತ್ರದ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಕೇವಲ 4,500 ಕೋಟಿ ರೂ. ಕೊಟ್ಟರೆ ಅದು ಹಲಾಲ್ ಬಜೆಟ್ ಹೇಗೆ ಆಗುತ್ತದೆ? ಎಂದು ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತರಲ್ಲಿ ಶಿಕ್ಷಣ ಪ್ರಮಾಣ ಕಡಿಮೆ ಇದೆ. ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಮರು ಮಾತ್ರ ಅಲ್ಲ. ಅದರಲ್ಲಿ ಜೈನರು, ಬೌದ್ಧರು ಮತ್ತು ಸಿಖ್ಖರು ಸಹ ಬರುತ್ತಾರೆ. ನಾವು ಸಮಾನತೆಯಲ್ಲಿ ನಂಬಿಕೆ ಇಟ್ಟುಕೊಂಡವರು. ಬಿಜೆಪಿ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂದು ಹೇಳುವ ಮೂಲಕ ಅನ್ಯಾಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಎಸ್ ಇಪಿ , ಟಿಎಸ್ಪಿಗೆ 42,000 ಕೋಟಿ ರೂ. ನೀಡಲಾಗಿದೆ. ಒಬಿಸಿಗೆ 4,300 ಕೋಟಿ ಹಾಗೂ ಅಲ್ಪಸಂಖ್ಯಾತರಿಗೆ 4,500 ಕೊಡಲಾಗಿದೆ. ಬಿಜೆಪಿಯ ಸಂಕುಚಿತ ಮನೋಭಾವಕ್ಕೆ ಸದನದಲ್ಲಿ ಉತ್ತರ ನೀಡುತ್ತೇನೆ. ಬಿಜೆಪಿ ಬಹುತ್ವಕ್ಕೆ ವಿರುದ್ಧವಾಗಿದೆ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.