ಹೊಸದಿಗಂತ ವರದಿ,ಚಿತ್ರದುರ್ಗ:
ನಟ ದರ್ಶನ್ ಮತ್ತವರ ಗ್ಯಾಂಗ್‌ನಿಂದ ಹತ್ಯೆಗೀಡಾಗಿರುವ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ನೀಡುವಂತೆ ಒತ್ತಾಯಿಸಿ ರೇಣುಕಾಸ್ವಾಮಿ ಕುಟುಂಬದವರು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ರೇಣುಕಾಸ್ವಾಮಿ ಪತ್ನಿ ಸಹನಾ ಹಾಗೂ ತಂದೆ ಶಿವನಗೌಡ ಗುರುವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ನಟ ದರ್ಶನ್ ಗ್ಯಾಂಗ್‌ನಿಂದ ಹತ್ಯೆಗೀಡಾ ರೇಣುಕಾಸ್ವಾಮಿಗೆ ವೃದ್ದ ತಂದೆ, ತಾಯಿ ಇದ್ದಾರೆ. ಪತ್ನಿ ಸಹನಾ ಗರ್ಭಿಣಿ. ಹೀಗಾಗಿ ಮನೆಯಲ್ಲಿ ಗಂಡುದಿಕ್ಕು ಎಂದು ಇದ್ದದ್ದು ರೇಣುಕಾಸ್ವಾಮಿ ಮಾತ್ರ. ಈಗ ಆತ ಹತ್ಯೆಗೀಡಾಗಿರುವ ಪರಿಣಾಮ ರೇಣುಕಾಸ್ವಾಮಿಯ ಕುಟುಂಬದ ಸದಸ್ಯರ ಮುಂದಿನ ಜೀವನಕ್ಕೆ ಯಾರೂ ಆಸರೆ ಇಲ್ಲದಂತಾಗಿದೆ. ಹಾಗಾಗಿ ಸರ್ಕಾರ ರೇಣುಕಾಸ್ವಾಮಿ ಪತ್ನಿ ಸಹನಾ ಅವರಿಗೆ ಸರ್ಕಾರಿ ನೌಕರಿ ನೀಡಬೇಕು. ಇದರಿಂದ ಜೀವನ ನಡೆಸಲು ಒಂದು ದಾರಿಯಾಗುತ್ತದೆ ಎಂದು ಕುಟುಂಬದವರು ಮನವಿ ಮಾಡಿದ್ದಾರೆ.
ನಟ ದರ್ಶನ್ ಕಡೆಯವರು ರೇಣುಕಾಸ್ವಾಮಿ ಮನೆಗೆ ಬರುತ್ತಾರೆ. ಅವರ ಕುಟುಂಬದವರನ್ನು ಭೇಟಿ ಮಾಡುತ್ತಾರೆ ಎಂಬ ವದಂತಿಗಳಿಗೆ ರೇಣುಕಾಸ್ವಾಮಿ ತಂದೆ ಶಿವನಗೌಡರು ಸ್ವಷ್ಟನೆ ನೀಡಿದ್ದಾರೆ. ಚಿತ್ರದುರ್ಗದ ವಿಆರ್‌ಎಸ್ ಬಡಾವಣೆಯ ನಿವಾಸದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ನಟ ದರ್ಶನ್ ನಮ್ಮ ಮನೆಗೆ ಬರುವ ವಿಷಯ ನನಗೆ ಗೊತ್ತಿಲ್ಲ. ಒಂದು ವೇಳೆ ಬಂದರೂ ನಾವು ಅವರನ್ನು ದ್ವೇಷ ಮಾಡುವುದಿಲ್ಲ. ಕಾನೂನು ಪ್ರಕಾರ ಏನೂ ನಡೆಯುತ್ತದೆಯೋ ಅದು ನಡೆಯಲಿ ಎಂದರು.
ನಟ ದರ್ಶನ್ ಬರುತ್ತಾರೆ, ಆರ್ಥಿಕ ಸಹಾಯ ನೀಡುತ್ತಾರೆ ಎಂಬ ಅಂತೆ ಕಂತೆಯ ವಿಚಾರ ಬೇಡ. ಮಗನನ್ನು ಕಳೆದುಕೊಂಡಿರುವ ನಾವು ನೋವಿನಲ್ಲಿದ್ದೇವೆ. ಪೊಲೀಸರು ಕಾನೂನು ಪ್ರಕಾರವಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಸರ್ಕಾರದ ಮೇಲೆ ನಮಗೆ ನಂಬಿಕೆ ಇದೆ. ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು. ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ. ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವ ಪ್ರಶ್ನೆ ಇಲ್ಲ ಎಂದು ಶಿವನಗೌಡರು ಹೇಳಿದರು.