ಪುಟ್ಟಪರ್ತಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆ ಮಾಡುವಂತೆ ಸಂಸದ ಕಾರಜೋಳ ಒತ್ತಾಯ

ಹೊಸದಿಗಂತ ವರದಿ,ಚಿತ್ರದುರ್ಗ: 
 ಚಿತ್ರದುರ್ಗದಿಂದ (ರಾಷ್ಟ್ರೀಯ ಹೆದ್ದಾರಿ-೪೮ ರಿಂದ) ಚಳ್ಳಕೆರೆ-ಪಾವಗಡ-ಪೆನುಕೊಂಡ-ಪುಟ್ಟಪರ್ತಿ ಮಾರ್ಗವಾಗಿ ಆಂಧ್ರ್ರಪ್ರದೇಶದ ಬುಕ್ಕಾಪಟ್ಟಣಂ (ರಾಷ್ಟ್ರೀಯ ಹೆದ್ದಾರಿ-೩೪೨) ವರೆಗಿನ ಅಂದಾಜು ೧೭೮.೭೧ ಕಿ.ಮೀ. ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದಜೇಗೇರಿಸಿ ಘೋಷಣೆ ಮಾಡುವಂತೆ ಸಂಸದ ಗೋವಿಂದ ಕಾರಜೋಳ ಅವರು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಐತಿಹಾಸಿಕ ಸ್ಥಳ ಕೋಟೆನಾಡು ಚಿತ್ರದುರ್ಗದಿಂದ ಪ್ರಾರಂಭವಾಗುವ ಈ ರಾಜ್ಯ ಹೆದ್ದಾರಿಯು ಕರ್ನಾಟಕದಲ್ಲಿ ೧೧೯ ಕಿ.ಮೀ. ಹಾಗೂ ಆಂಧ್ರ್ರಪ್ರದೇಶದಲ್ಲಿ ೫೮.೯೦ ಕಿ.ಮೀ. ಸಾಗುತ್ತದೆ. ಈ ಮಾರ್ಗದಲ್ಲಿ ಬರುವ ಚಳ್ಳಕೆರೆ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದೆ.
ಇಲ್ಲಿ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್, ಇಸ್ರೋ, ಡಿ.ಆರ್.ಡಿ.ಓ. ಬಾಬಾ ಆಟೋಮಿಕ್ ರೀಸರ್ಚ್ ಸೆಂಟರ್ ಸೇರಿದಂತೆ ಹಲವು ರಕ್ಷಣ ಇಲಾಖೆಗೆ ಸಂಬಂಧಿಸಿದ ಕೇಂದ್ರಗಳು ಸುಮಾರು ೮,೦೭೩ ಎಕರೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದಲ್ಲದೇ ಚಳ್ಳಕೆರೆ ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ಸಾಕಷ್ಟು ಪ್ರಖ್ಯಾತಿ ಗಳಿಸಿದೆ. ಅಲ್ಲದೇ ಇತರೆ ಕೃಷಿ ಉತ್ಪನ್ನಗಳ ಪ್ರಮುಖ ಮಾರುಕಟ್ಟೆಯಾಗಿ ಹೆಸರು ಗಳಿಸಿದೆ.
ಇದೇ ಮಾರ್ಗದಲ್ಲಿ ಬರುವ ಪಾವಗಡದಲ್ಲಿ ಪ್ರಪಂಚದ ಮೂರನೇ ಅತಿ ದೊಡ್ಡ ಸೋಲಾರ್ ಪಾರ್ಕ್ ತಲೆ ಎತ್ತಿದೆ, ಸುಮಾರು ೧೩,೦೦೦ ಎಕರೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಪಾರ್ಕ್ ೨,೦೫೦ ಒತಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಅಂದಾಜು ೧೪,೮೦೦ ಕೋಟಿಯಷ್ಟು ಅನುದಾನವನ್ನು ಇದಕ್ಕಾಗಿ ವಿನಿಯೋಗಿಸಲಾಗಿದೆ.

ಚಿತ್ರದುರ್ಗದಿಂದ ಚಳ್ಳಕೆರೆ ಮಾರ್ಗವಾಗಿ ಬುಕ್ಕಪಟ್ಟಣಂ ವರೆಗಿನ ರಾಜ್ಯ ಹೆದ್ದಾರಿಯನ್ನು ೨೦೧೬ ರಲ್ಲಿಯೇ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಹೆದ್ದಾರಿ ಸಚಿವಾಲಯ ತಾತ್ವಿಕ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಮಗ್ರ ಯೋಜನಾ ವರದಿ ಹಾಗೂ ಅಂದಾಜುಪಟ್ಟಿಯನ್ನು  ೨೦೧೮ ರಲ್ಲಿಯೇ ಹೆದ್ದಾರಿ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಅಲ್ಲದೇ ರಾಜ್ಯ ಸರ್ಕಾರ ೨೦೨೨ ರಲ್ಲಿಯೇ ನಿರಾಕ್ಷೇಪಣಾ ಪತ್ರ ಹಾಗೂ ಕಾರ್ಯಸಾಧ್ಯತಾ ವರದಿಯನ್ನು ನೀಡಿದೆ.

ಹಾಗಾಗಿ ಚಿತ್ರದುರ್ಗದಿಂದ ಚಳ್ಳಕೆರೆ-ಪಾವಗಡ-ಪೆನುಕೊಂಡ-ಪುಟ್ಟಪರ್ತಿ ಮಾರ್ಗವಾಗಿ ಆಂಧ್ರ್ರಪ್ರದೇಶದ ಬುಕ್ಕಪಟ್ಟಣಂವರೆಗಿನ ೧೭೮.೭೧ ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಣೆ ಮಾಡಿ ಅಭಿವೃದ್ದಿಪಡಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!