ವಾಲ್ಮೀಕಿ ಹಗರಣದಲ್ಲಿ ಸರ್ಕಾರ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆಯಲ್ಲಿ ನಿಯಮ 69ರಡಿ ನಡೆದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದ್ದು, ಹಗರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ಕೂಡ ರಾಜೀನಾಮೆ ಕೊಡಬೇಕು ಎಂದು ಹೇಳುತ್ತಿದ್ದಾರೆ.ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಈ ನಿಟ್ಟಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಎಸ್ ಐಟಿ ತನಿಖೆಯನ್ನೇ ವಾಪಸ್ ಪಡೆಯಬೇಕು ಎಂದಿದ್ದಾರೆ. ಬಿಜೆಪಿಯವರದ್ದು ಬರೀ ವೀರಾವೇಷದ ಮಾತುಗಳು. ನಾನು ಬಿಜೆಪಿಯವರಿಂದ ಪಾಠ ಹೇಳಿಸಿಕೊಳ್ಳಬೇಕಿಲ್ಲ ಎಂದು ಗುಡುಗಿದರು.

ಇದೇ ವೇಳೆ ವಾಲ್ಮೀಕಿ ನಿಗಮದ ಹಗರಣ ಸಂಬಂಧ ಆತ್ಮಹತ್ಯೆಗೆ ಶರಣಾದ ಅಧಿಕಾರಿ ಚಂದ್ರಶೇಖರ್ ಬರೆದಿರುವ ಡೆತ್ ನೋಟ್ ನಲ್ಲಿ ಇರುವ ಅಂಶಗಳೇನು ಎಂಬುದನ್ನು ಸದನದಲ್ಲಿ ಓದಿ ಹೇಳುತ್ತೇನೆ ಎಂದು ಡೆತ್ ನೋಟ್ ಓದಿದರು.

ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಹೆಸರನ್ನು ಬರೆದಿದ್ದಾರೆ. ಆದರೆ ಎಲ್ಲಿಯೂ ಸಚಿವರ, ಶಾಸಕರ ಹೆಸರನ್ನು ಬರೆದಿಲ್ಲ. ಸಾಯಲು ಹೊರಟವರು ಸತ್ಯವನ್ನೇ ಹೇಳುತ್ತಾರೆ ಎಂಬ ಮಾತಿದೆ. ಹಾಗಾಗಿ ಇದನ್ನು ಗಮನಿಸಬೇಕು ಎಂದು ಸ್ಪಷ್ಟಪಡಿಸಿದರು. ಇನ್ನು ಮೃತ ಚಂದ್ರಶೇಖರ್ ಪತ್ನಿ ನೀಡಿರುವ ದೂರಿನ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಓದಿ ಹೇಳಿದ್ದಾರೆ. ಚಂದ್ರಶೇಖರ್ ಕುಟುಂಬ ತಮಿಳುನಾಡು ಮೂಲದ ಭೋವಿ ಸಮಾಜದವರು. ಆದರೆ ಬಿಜೆಪಿಯವರು ಅವರನ್ನು ದಲಿತರು ಎಂದು ಹೇಳುತ್ತಾ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇನ್ನು ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇದರಲ್ಲಿ ಸರ್ಕಾರ ಯಾರನ್ನೂ ರಕ್ಷಣೆ ಮಾಡಲ್ಲ. ವಿಪಕ್ಷದವರಾದ ನಿಮ್ಮನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!