ಹೊಸದಿಗಂತ ವರದಿ ಹಾವೇರಿ:
ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿಗೆ ಯಾವುದೇ ರೀತಿಯ ಬಂಡಾಯ ಇಲ್ಲ. ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಬೆಳವಣಿಗೆಗಳು ಸಹಜ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಿಗ್ಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿಗೆ ಯಾವುದೇ ರೀತಿಯ ಬಂಡಾಯ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಯಾರೇ ಆದರೂ ಚುನಾವಣೆಯನ್ನು ಸ್ಪರ್ಧಾತ್ಮಕ ಮತ್ತು ಸೌಹಾರ್ದಯುತವಾಗಿ ಎದುರಿಸುತ್ತೇವೆ.
ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಕೆಯ ದಿನ ಬಿಜೆಪಿ ರಾಜ್ಯ ನಾಯಕರಾದ ಮಾಜಿ ಸಿಎಂ ಬಿ.ಎಸ್.ವೈ ಸೇರಿದಂತೆ ಹಿರಿಯ ನಾಯಕರು ಆಗಮಿಸಲಿದ್ದಾರೆ ಎಂದರು.
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಿ.ಪಿ ಯೋಗೇಶ್ವರ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಬಹಳ ಪ್ರಯತ್ನ ಮಾಡಿದ್ದೇವೆ. ಅವರು ಕಾಂಗ್ರೆಸ್ ಸೇರಿರುವುದು ದೊಡ್ಡ ದುರಂತ. ಕಾಂಗ್ರೆಸ್‌ಗೆ ಯಾರೂ ಅಭ್ಯರ್ಥಿ ಇರಲಿಲ್ಲ.
ಅಲ್ಲಿ ಸುಲಭವಾಗಿ ಎನ್‌ಡಿಎ ಅಭ್ಯರ್ಥಿ ಗೆಲ್ಲಬಹುದು. ಈಗಲೂ ಆ ಕ್ಷೇತ್ರದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಪ್ರಭಾವ ಇದೆ. ಹಿಂದೆ ಬಿಜೆಪಿ ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳು ಸ್ಪರ್ಧೆ ಮಾಡಿ ತಿಕೋನ ಸ್ಪರ್ಧೆ ಇದ್ದಾಗಲೂ ಕುಮಾರಸ್ವಾಮಿಯವರು ಗೆಲುವು ಸಾಧಿಸಿದ್ದಾರೆ. ಈ ಉಪ ಚುನಾವಣೆಯಲ್ಲಿಯೂ ಜೆಡಿಎಸ್ ಅಭ್ಯರ್ಥಿಯೇ ಗೆಲ್ಲುವ ವಿಶ್ವಾಸ ನನಗಿದೆ ಎಂದು ಹೇಳಿದರು.