ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು (N Chandrababu Naidu) ಅವರು ಕೌಶಲ್ಯಾಭಿವೃದ್ಧಿ ಹಗರಣಕ್ಕೆ (skill development scam) ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ (Supreme Court )ಇಂದು (ಮಂಗಳವಾರ) ವಿಚಾರಣೆ ನಡೆಸಿದೆ.
ಈ ವೇಳೆ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಅಕ್ಟೋಬರ್ 9ಕ್ಕೆ ಮುಂದೂಡಿದೆ. ಅದೇ ವೇಳೆ ಹೈಕೋರ್ಟ್‌ಗೆ ಸಲ್ಲಿಸಿರುವ ದಾಖಲೆಗಳ ಸಂಪೂರ್ಣ ಸಂಗ್ರಹವನ್ನು ತನ್ನ ಮುಂದೆ ಇಡುವಂತೆ ಸುಪ್ರೀಂಕೋರ್ಟ್ ಆಂಧ್ರಪ್ರದೇಶ ಸರ್ಕಾರವನ್ನು ಕೇಳಿದೆ.
ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿದೆ. ಕಳೆದ ವಾರ, ನ್ಯಾಯಮೂರ್ತಿ ಎಸ್‌ವಿಎನ್ ಭಟ್ಟಿ ವಿಚಾರಣೆಯಿಂದ ಹಿಂದೆ ಸರಿದಿದ್ದರಿಂದ ಅವರ ಅರ್ಜಿಯನ್ನು ಮುಂದೂಡಲಾಯಿತು.
ಎಫ್‌ಐಆರ್ ರದ್ದುಪಡಿಸುವ ತಮ್ಮ ಅರ್ಜಿಯನ್ನು ವಜಾಗೊಳಿಸಿದ ಆಂಧ್ರಪ್ರದೇಶ ಹೈಕೋರ್ಟ್‌ನ 22.09.2023ರ ತೀರ್ಪನ್ನು ಪ್ರಶ್ನಿಸಿ ನಾಯ್ಡು ಅವರು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದಾರೆ. ನಾಯ್ಡು ಅವರನ್ನು ಸೆಪ್ಟೆಂಬರ್ 9 ರಂದು ಬಂಧಿಸಲಾಗಿದ್ದು ಅವರು ಅಂದಿನಿಂದ ಬಂಧನದಲ್ಲಿದ್ದಾರೆ.