ಹೊಸದಿಗಂತ ವರದಿ ಬೆಂಗಳೂರು:
ಮಾಹಿತಿ ಹಕ್ಕಿನಡಿ (ಆರ್‌ಟಿಐ) ಹೆಚ್ಚಿನ ಮಾಹಿತಿಗಾಗಿ ಅರ್ಜಿ ಹಾಕುವವರ ವಿವರ ಕೊಡಿ ಎಂದು ಸರಕಾರದ ಉಪ ಕಾರ್ಯದರ್ಶಿ ಸೂಚಿಸಿದ್ದಾರೆ. ಮಾಹಿತಿ ಹಕ್ಕು ಕಾನೂನಿಗೆ ವ್ಯತಿರಿಕ್ತವಾಗಿ ಸರಕಾರ ನಡೆದುಕೊಳ್ಳುತ್ತಿದೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರವು ಮಾಹಿತಿ ಹಕ್ಕು ಕಾರ್ಯಕರ್ತರನ್ನು ಪರೋಕ್ಷವಾಗಿ ಬೆದರಿಸುತ್ತಿದೆ. ಸರಕಾರ ಮಾಹಿತಿಗಳನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಇದು ಕಾಯ್ದೆಗೆ ವಿರುದ್ಧವಾಗಿದೆ. ಹಗರಣಗಳು ಬಹಿರಂಗ ಆಗಬಾರದೆಂಬ ಉದ್ದೇಶ ಇದರಡಿ ಇದ್ದಂತಿದೆ ಎಂದು ತಿಳಿಸಿದರು.
ಹಿಂದೆ ಲೋಕಾಯುಕ್ತವನ್ನು ನಿರ್ನಾಮ ಮಾಡಿದ್ದರು. ಈಗ ದಾಖಲೆ ಕೇಳುವವರ ಮೇಲೆ ಪ್ರಹಾರ ಮಾಡುವ ಪ್ರಯತ್ನ ನಡೆದಿದೆ. ಈಗಿನ ಸರಕಾರದ ಸೂಚನೆ ಭ್ರಷ್ಟಾಚಾರಕ್ಕೆ ಪೂರಕ ಎಂದು ನುಡಿದರು. ಆರ್‌ಟಿಐ ಕಾರ್ಯಕರ್ತರ ಮೇಲೆ ಹಲ್ಲೆ, ದೌರ್ಜನ್ಯ ಮತ್ತು ಕೊಲೆ ತಡೆಯಬೇಕಾದ ಸರಕಾರ ಅದಕ್ಕೆ ತದ್ವಿರುದ್ಧವಾಗಿ ನಡೆಯುತ್ತಿದೆ ಎಂದು ವಿವರಿಸಿದರು.
ಇದೇ ವೇಳೆ ಮುಖಂಡ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ ರಾವ್ ಅವರು ಮಾತನಾಡಿ, ಅತ್ಯಂತ ಕಡಿಮೆ ಸಮಯದಲ್ಲಿ ಸರಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಸಾಮಾಜಿಕ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು ಮಾಡುತ್ತಿದ್ದಾರೆ. ಶಿವಮೊಗ್ಗ ಪ್ರಕರಣದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬೆತ್ತ ಹಿಡಿದು ಬರುವ ಸ್ಥಿತಿ ಬಂದಿದೆ ಎಂದರೆ, ಅವರಿಗೇ ಕಲ್ಲು ಹೊಡೆಯುವ ಸ್ಥಿತಿ ಬಂದರೆ ಇದೇನು ಕಡಲೆಕಾಯಿ ವ್ಯಾಪಾರವೇ ಎಂದು ಪ್ರಶ್ನಿಸಿದರು.
ಆರ್‌ಟಿಐ ಕಾರ್ಯಕರ್ತರ ವಿವರ ಪಡೆಯುವ ಮೂಲಕ ಪ್ರಶ್ನೆ ಕೇಳುವವರನ್ನು ಹತ್ತಿಕ್ಕುವ ಉದ್ದೇಶವಿದೆ ಎಂದು ದೂರಿದರು. ಈ ಸರಕಾರವು ಜನವಿರೋಧಿಯಾಗಿ ಪರಿವರ್ತನೆ ಹೊಂದಿದೆ ಎಂದು ತಿಳಿಸಿದರು.