ಹೊಸದಿಗಂತ ವರದಿ ಮಡಿಕೇರಿ:
ಸತ್ಪ್ರಜೆಗಳನ್ನು ರೂಪಿಸುವ ಹೊಣೆಗಾರಿಕೆಯುಳ್ಳ ಶಿಕ್ಷಕ ವೃತ್ತಿಯಲ್ಲಿರುವವರಿಗೆ ಎಂದಿಗೂ ನಿವೃತ್ತಿ ಎಂಬುದಿಲ್ಲ. ಇವರು ಸಮಾಜಕ್ಕೆ ಸದಾ ಮಾರ್ಗದರ್ಶಕರಾಗಿರುತ್ತಾರೆ ಎಂದು ಹಿರಿಯ ಚಿಂತಕ, ವೈದ್ಯ ಡಾ.ಎಂ.ಜಿ.ಪಾಟ್ಕರ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಪ್ರಥಮ ಕ್ರೀಡಾಶಾಲೆಯಾದ ಕೂಡಿಗೆ ಕ್ರೀಡಾಶಾಲೆಯಲ್ಲಿ ಶಿಕ್ಷಕಿಯಾಗಿ 36 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದ ಕುಂತಿ ಬೋಪಯ್ಯ ಅವರ ಕುರಿತ ‘ಕುಂತಿ ಟೀಚರ್’ ಸಾಕ್ಷ್ಯಚಿತ್ರವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿ, ಸಂಸ್ಕಾರ ಕಲಿಸಿದ ಶಿಕ್ಷಕರು ನಿವೖತ್ತಿಯಾಗುವುದು ಸೇವಾ ದಾಖಲೆಗೆ ಮಾತ್ರವೇ ಆಗಿದ್ದು, ನಿಜವಾದ ಅರ್ಥದಲ್ಲಿ ಸಮಾಜಕ್ಕೆ ಸದಾ ಮಾರ್ಗದರ್ಶಕರಾಗಿಯೇ ಇರುವ ಶಿಕ್ಷಕರಿಗೆ ನಿವೖತ್ತಿ ಎಂಬುದೇ ಇಲ್ಲ. ಆ ಪವಿತ್ರ ವೖತ್ತಿಯಲ್ಲಿರುವವರು ಸದಾ ಸಮಾಜದ ಹಿತಚಿಂತನೆ ಮಾಡುತ್ತಿರುತ್ತಾರೆ ಎಂದರು.
ಪ್ರತಿಯೊಬ್ಬರ ಜೀವನದಲ್ಲಿಯೂ ಓರ್ವ ಆದರ್ಶ ಶಿಕ್ಷಕ ಪ್ರಮುಖ ಪಾತ್ರ ವಹಿಸಿರುತ್ತಾನೆ ಎಂದು ಹೇಳಿದ ಪಾಟ್ಕರ್, ಕೂಡಿಗೆ ಕ್ರೀಡಾಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಕುಂತಿ ಬೋಪಯ್ಯ ಅವರು ಕೊಡಗಿಗೆ ಮಾತ್ರವಲ್ಲ ದೇಶದಲ್ಲಿಯೇ ಆದರ್ಶ ಶಿಕ್ಷಕಿಯರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಅರ್ಹತೆ ಹೊಂದಿದ್ದಾರೆ ಎಂದು ಶ್ಲಾಘಿಸಿದರು.
ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ ಮಾತನಾಡಿ, ಕೂಡಿಗೆ ಕ್ರೀಡಾಶಾಲೆಯಲ್ಲಿ ಮಹತ್ತರ ಸಾಧನೆ ಮಾಡಿ ಶಾಲೆಯ ಉನ್ನತಿಗೆ ಅವಿರತ ಶ್ರಮಿಸಿದ ಕುಂತಿ ಬೋಪಯ್ಯ ಅವರ ಕುರಿತ ಸಾಕ್ಷ್ಯಚಿತ್ರ ಖಂಡಿತವಾಗಿಯೂ ಸಮಾಜಕ್ಕೆ ಅಗತ್ಯವಾಗಿತ್ತು. ಸಾಧನೆಯ ಬಗ್ಗೆ ಪ್ರಚಾರದಿಂದ ದೂರವಾಗಿ ಎಲೆಮರೆಯ ಹೂವಿನಂತೆ ಕುಂತಿಬೋಪಯ್ಯ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ರಾಜಕೀಯದಿಂದ ಸಾಕಷ್ಟು ಅಂತರ ಕಾಯ್ದುಕೊಂಡು ತಾನೋರ್ವ ಸರ್ಕಾರಿ ಸೇವಕಿ ಎಂಬಂತೆ ಕಾರ್ಯನಿರ್ವಹಿಸಿ ಸಾವಿರಾರು ವಿದ್ಯಾರ್ಥಿಗಳ ಶ್ರೇಯೋಭಿವೖದ್ದಿಗೆ ಕುಂತಿ ಕಾರಣರಾಗಿದ್ದಾರೆ. ಇವರಿಗೆ ರಾಜ್ಯಮಟ್ಟದ ಪ್ರಶಸ್ತಿ ಮಾತ್ರವಲ್ಲ ರಾಷ್ಟ್ರಮಟ್ಟದ ಪ್ರಶಸ್ತಿ ದೊರಕುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕೂಡಿಗೆ ಕ್ರೀಡಾಶಾಲೆಯಲ್ಲಿ ಶಿಕ್ಷಕಿ, ಪ್ರಾಂಶುಪಾಲೆಯಾಗಿ ನಿವೖತ್ತಿಯಾದ ಕುಂತಿ ಬೋಪಯ್ಯ ಮಾತನಾಡಿ, ಶಿಕ್ಷಕ ವರ್ಗಕ್ಕೆ ಈ ಮೊದಲು ದೊರಕುತ್ತಿದ್ದ ಗೌರವ ಇಂದಿನ ದಿನಗಳಲ್ಲಿ ದೊರಕುತ್ತಿಲ್ಲ. ವಿದ್ಯಾರ್ಥಿಗಳಿಗೆ ಶಿಕ್ಷಕರ ಬಗ್ಗೆ ಪ್ರೀತಿ, ವಿಶ್ವಾಸ ಕಡಿಮೆಯಾಗುತ್ತಲೇ ಇದೆ ಎಂದು ವಿಷಾದ ವ್ಯಕ್ತಪಡಿಸಿದರಲ್ಲದೆ, ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಗಣಿತ-ವಿಜ್ಞಾನ ಕಷ್ಟವಲ್ಲ:
ವಿದ್ಯಾರ್ಥಿಗಳಿಗೆ ಗಣಿತ, ಇಂಗ್ಲೀಷ್ ವಿಷಯಗಳು ಕಷ್ಟ ಎಂಬ ಕಲ್ಪನೆಯಿದೆ. ಆದರೆ ಶಿಕ್ಷಕ ವರ್ಗದವರು ಸರಳ ರೀತಿಯಲ್ಲಿ ಈ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟು ಈ ವಿಷಯಗಳಲ್ಲಿ ಆಸಕ್ತಿ ಮೂಡಿಸಬೇಕು ಎಂದೂ ಅವರು ಸಲಹೆ ನೀಡಿದರು.
ಕುಂತಿ ಟೀಚರ್ ಸಾಕ್ಷ್ಯ ಚಿತ್ರ ನಿರ್ದೇಶಕ, ಪತ್ರಕರ್ತ ಅನಿಲ್ ಎಚ್.ಟಿ. ಮಾತನಾಡಿ, ತನ್ನ ಪಾಡಿಗೆ ತಾವು 36 ವರ್ಷಗಳ ಕಾಲ ಕ್ರೀಡಾಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಆ ಶಾಲೆಯ ಏಳಿಗೆಗೆ ಶ್ರಮಿಸಿದ ಕುಂತಿ ಅವರ ಸಾಧನೆ ಜೊತೆಗೆ ರಾಜ್ಯದ ಸುಸಜ್ಜಿತ ಕ್ರೀಡಾಶಾಲೆಯ ಬಗ್ಗೆ ಸಾಕ್ಷ್ಯ ಚಿತ್ರದಲ್ಲಿ ಮಾಹಿತಿ ನೀಡಲಾಗಿದೆ. ಕೊಡಗಿಗೆ ಕೂಡಿಗೆ ಕ್ರೀಡಾಶಾಲೆ ಖಂಡಿತವಾಗಿಯೂ ಪ್ರತಿಷ್ಠೆಯ ಶಾಲೆಯಾಗಿದೆ. ಹೀಗಾಗಿ ಸಾಕ್ಷ್ಯ ಚಿತ್ರದಲ್ಲಿ ಕೂಡಿಗೆ ಕ್ರೀಡಾಶಾಲೆಯ ಬೆಳವಣಿಗೆಯನ್ನೂ ದಾಖಲಿಸಲಾಗಿದೆ ಎಂದರು.ಓರ್ವ ಆದರ್ಶ ಶಿಕ್ಷಕಿಯ ಬಗ್ಗೆ ಸಾಕ್ಷ್ಯ ಚಿತ್ರದ ಮೂಲಕ ಬೆಳಕು ಚೆಲ್ಲುವ ಪ್ರಯತ್ನ ಕುಂತಿಟೀಚರ್ ಸಾಕ್ಷ್ಯ ಚಿತ್ರದ ಮೂಲಕ ಆಗಿದೆ ಎಂದೂ ಅನಿಲ್ ಹೇಳಿದರು.
ಮಡಿಕೇರಿ ನಗರಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಸ್ನೇಹಮಯಿ ಗೖಹಿಣಿಯಾಗಿ 36 ವರ್ಷಗಳ ಕಾಲ ಮಡಿಕೇರಿಯಿಂದ ಕೂಡಿಗೆಗೆ ಪ್ರತಿನಿತ್ಯ ತೆರಳಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ಕಲಿಸಿದ ಕುಂತಿಬೋಪಯ್ಯ ಅವರ ಸಾಧನೆ ಈ ಸಾಕ್ಷ್ಯ ಚಿತ್ರದ ಮೂಲಕ ದಾಖಲಾಗಿರುವುದು ಶ್ಲಾಘನೀಯ ಕಾರ್ಯ ಎಂದು ಪ್ರಶಂಶಿಸಿದರು.
ವೀರಾಜಪೇಟೆಯ ಸಮಾಜ ಸೇವಕಿ ಕಾಂತಿ ಸತೀಶ್ ಮಾತನಾಡಿ, ಓರ್ವ ತಾಯಿಯಾಗಿ, ಓರ್ವ ಶಿಕ್ಷಕಿಯಾಗಿ, ಓರ್ವ ಪತ್ನಿಯಾಗಿ, ಓರ್ವ ಮಹಿಳೆಯಾಗಿ ಹೇಗಿರಬೇಕು ಎಂಬುದಕ್ಕೆ ಕುಂತಿ ಅವರು ಮಾದರಿಯಾಗಿದ್ದಾರೆ. ಇವರ ಆದರ್ಶಮಯ ಜೀವನ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಕೂಡಿಗೆ ಕ್ರೀಡಾಶಾಲೆಯ ಪ್ರಾಂಶುಪಾಲ ದೇವಕುಮಾರ್ ಮಾತನಾಡಿ, ಒಂದು ದಿನವೂ ರಜೆ ಪಡೆಯದೆ ಕ್ರೀಡಾಶಾಲೆಗೆ 36 ವರ್ಷಗಳ ಕಾಲ ಬಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಸಂಸ್ಕಾರಯುತ ಶಿಕ್ಷಣ ನೀಡಿದ್ದ ಕುಂತಿಬೋಪಯ್ಯ ಅವರ ಆದರ್ಶವನ್ನು ಭವಿಷ್ಯದಲ್ಲಿಯೂ ಕ್ರೀಡಾಶಾಲೆಯಲ್ಲಿ ಮುಂದುವರೆಸಲಾಗುತ್ತದೆ ಎಂದು ಭರವಸೆ ನೀಡಿದರು.
ಕ್ರೀಡಾ ಇಲಾಖೆಯ ತರಬೇತುದಾರ ಅಂತೋಣಿ ಡಿಸೋಜಾ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಕ್ರೀಡಾ ಸಾಧನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದ ತನ್ನನ್ನು ಗುರುತಿಸಿ ಕ್ರೀಡಾ ಶಾಲೆಯಲ್ಲಿ ಕ್ರೀಡಾ ತರಬೇತುದಾರನನ್ನಾಗಿಸಿ ನೂರಾರು ಸಾಧಕರಿಗೆ ತರಬೇತಿ ನೀಡಲು ಅವಕಾಶ ನೀಡಿದ ಕುಂತಿ ಅವರು ಜೀವನದಲ್ಲಿ ಆದರ್ಶಪ್ರಾಯ ವ್ಯಕ್ತಿಯಾಗಿದ್ದಾರೆ ಎಂದರು.
ಸಾಕ್ಷ್ಯ ಚಿತ್ರ ನಿರ್ಮಿಸಿ, ನಿರ್ದೇಶಿಸಿದ ಹಿರಿಯ ಪತ್ರಕರ್ತ ಅನಿಲ್ ಎಚ್.ಟಿ. ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಉಪನ್ಯಾಸಕಿ ಕೆ.ಜಯಲಕ್ಷ್ಮಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಅಶ್ವಿನಿ ಕಿರಣ್ ಕುಮಾರ್ ವಂದಿಸಿದರು. ಕುಂತಿ ಅವರ ಪತಿ, ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಸೇರಿದಂತೆ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಹಾಜರಿದ್ದರು.