ಭಯೋತ್ಪಾದನೆ ವಿಚಾರದಲ್ಲಿ ದ್ವಂದ್ವ ನಿಲುವಿಗೆ ಜಾಗವಿಲ್ಲ: ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಖಡಕ್ ಸಂದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆಯೇ ಹೊರತು ಯುದ್ಧವನ್ನಲ್ಲ ಎಂದು ರಷ್ಯಾದಲ್ಲಿ ನಡೆದ ಬ್ರಿಕ್ಸ್‌ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದೇ ವೇಳೆ ಚೀನಾದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಫಂಡಿಂಗ್ ಮಾಡುವುದನ್ನು ಎದುರಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು. ಇಂತಹ ಗಂಭೀರ ವಿಷಯದ ಬಗ್ಗೆ ದ್ವಂದ್ವ ನಿಲುವಿಗೆ ಜಾಗವಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡುತ್ತಿರುವ ಚೀನಾದತ್ತ ಬೆರಳು ತೋರಿಸಿದ್ದಾರೆ.

ಜಗತ್ತು ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ ನಮ್ಮ ಸಭೆ ನಡೆಯುತ್ತಿದೆ. ಪ್ರಪಂಚವು ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ವಿಭಜನೆಯ ಬಗ್ಗೆಯೂ ಮಾತನಾಡುತ್ತಿದೆ. ಈ ಸಂದರ್ಭದಲ್ಲಿ ಹಣದುಬ್ಬರವನ್ನು ತಡೆಗಟ್ಟುವುದು ಮತ್ತು ಆಹಾರ, ಶಕ್ತಿ, ಆರೋಗ್ಯ ಮತ್ತು ನೀರಿನ ಭದ್ರತೆಯನ್ನು ಖಾತ್ರಿಪಡಿಸುವುದು ಆದ್ಯತೆಯ ವಿಷಯಗಳಾಗಿವೆ. ತಂತ್ರಜ್ಞಾನದ ಈ ಯುಗದಲ್ಲಿ ತಪ್ಪು ಮಾಹಿತಿ (ಆನ್‌ಲೈನ್‌ನಲ್ಲಿ ಹರಡುವಿಕೆ) ಮತ್ತು ಡೀಪ್‌ಫೇಕ್‌ ಮೊದಲಾದ ಸೈಬರ್ ವಂಚನೆಗಳಂತಹ ಹೊಸ ಸವಾಲುಗಳು ಎದುರಾಗಿವೆ ಎಂದು ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಬ್ರಿಕ್ಸ್ ಗುಂಪಿನ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿವೆ. ನಾವು ವೈವಿಧ್ಯಮಯ ಮತ್ತು ಅಂತರ್ಗತ ವೇದಿಕೆಯಾಗಿ ಈ ಎಲ್ಲಾ ಕ್ಷೇತ್ರಗಳಲ್ಲಿ ಸಕಾರಾತ್ಮಕ ಪಾತ್ರವನ್ನು ವಹಿಸಬಹುದು ಎಂದು ನಾನು ನಂಬುತ್ತೇನೆಂದು ಹೇಳಿದ್ದಾರೆ.

ನಮ್ಮ ವಿಧಾನವು ಜನಕೇಂದ್ರಿತವಾಗಿರಬೇಕು. ಬ್ರಿಕ್ಸ್‌ ವಿಭಜನೆ ಮಾಡುವುದಕ್ಕಾಗಿ ಅಲ್ಲ. ನಾವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆಯೇ ಹೊರತು ಯುದ್ಧವಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!