ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಿಂದ ಪಾಕಿಸ್ತಾನದ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ತೆರಳುವ ಪ್ರಯಾಣ ಖಾತ್ರಿಗೆ ಕರ್ತಾರ್‌ಪುರ- ಕಾರಿಡಾರ್‌ನ ಒಪ್ಪಂದದ ಮಾನ್ಯತೆಯನ್ನು ಐದು ವರ್ಷಗಳವರೆಗೆ ವಿಸ್ತರಿಸಲು ಭಾರತ ಮತ್ತು ಪಾಕಿಸ್ತಾನ ಒಪ್ಪಿಕೊಂಡಿವೆ.
ಗುರುದ್ವಾರಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಭಾರತೀಯ ಯಾತ್ರಾರ್ಥಿಗಳ ಮೇಲೆ ವಿಧಿಸುವ 20 ಅಮೆರಿಕನ್ ಡಾಲರ್ ಸೇವಾ ಶುಲ್ಕವನ್ನು ಪಾಕಿಸ್ತಾನ ರದ್ದು ಮಾಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಪುನರುಚ್ಚರಿಸಿದೆ.ಕರ್ತಾರ್‌ಪುರ ಸಾಹಿಬ್ ಕಾರಿಡಾರ್‌ನ ಒಪ್ಪಂದದ ಮಾನ್ಯತೆಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಲು ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಮೂಲಕ ಪಾಕಿಸ್ತಾನದ ನರೋವಾಲ್‌ನ ಗುರುದ್ವಾರ ದರ್ಬಾರ್ ಸಾಹಿಬ್ ಕರ್ತಾರ್‌ಪುರಕ್ಕೆ ಭಾರತದಿಂದ ಯಾತ್ರಿಕರ ಭೇಟಿಗೆ ಅನುಕೂಲವಾಗುವಂತೆ ಅಕ್ಟೋಬರ್ 24, 2019 ರಂದು ಐದು ವರ್ಷಗಳ ಅವಧಿಗೆ ಉಭಯ ದೇಶಗಳ ನಡುವೆ ಒಪ್ಪಂದವಾಗಿತ್ತು.ಈಗ ಒಪ್ಪಂದದ ಮಾನ್ಯತೆ ವಿಸ್ತರಣೆಯಿಂದ ಪಾಕಿಸ್ತಾನದ ಪವಿತ್ರ ಗುರುದ್ವಾರಕ್ಕೆ ಭೇಟಿ ನೀಡಲು ಭಾರತದಿಂದ ಯಾತ್ರಾರ್ಥಿಗಳಿಗೆ ಮತ್ತಷ್ಟು ಅನುಕೂಲವಾಗಲಿದೆ. ಯಾತ್ರಾರ್ಥಿಗಳಿಗೆ ಪಾಕಿಸ್ತಾನ ವಿಧಿಸುವ 20 ಅಮೆರಿಕನ್ ಡಾಲರ್ ಸೇವಾ ಶುಲ್ಕ ರದ್ದತಿ ಕುರಿತ ಯಾತ್ರಾರ್ಥಿಗಳ ಮನವಿ ಹಿನ್ನೆಲೆಯಲ್ಲಿ ಅವರ ಮೇಲೆ ಯಾವುದೇ ಶುಲ್ಕ ಅಥವಾ ಶುಲ್ಕವನ್ನು ವಿಧಿಸದಂತೆ ಭಾರತ ಮತ್ತೊಮ್ಮೆ ಪಾಕಿಸ್ತಾನವನ್ನು ಒತ್ತಾಯಿಸಿದೆ ಎಂದು MEA ಹೇಳಿದೆ.
2021ರಲ್ಲಿ ಭಾರತದಿಂದ ಒಟ್ಟು 10, 025 ಯಾತ್ರಿಕರು 4 ಕಿ. ಮೀ. ದೂರದ ಕರ್ತಾರ್ ಪುರ ಕಾರಿಡಾರ್ ಮೂಲಕ ಗುರದ್ವಾರಕ್ಕೆ ತೆರಳಿದ್ದರೆ, 2022 ರಲ್ಲಿ 86, 097 ಮತ್ತು 2023ರಲ್ಲಿ 96,555 ಯಾತ್ರಿಕರು ತೆರಳಿದ್ದಾರೆ ಎನ್ನಲಾಗಿದೆ.
ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲಿ ಮುಚ್ಚಲಾಗಿದ್ದ ಕಾರಿಡಾರ್ ಒಂದೂವರೆ ವರ್ಷಗಳ ನಂತರ ನವೆಂಬರ್ 2021 ರಲ್ಲಿ ಮತ್ತೆ ಕಾರ್ಯಾರಂಭ ಮಾಡಿತು.