ಹೊಸದಿಗಂತ ವರದಿ ಹುಬ್ಬಳ್ಳಿ:
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನೌಕರರಿಗೆ ಸರ್ಕಾರದಿಂದ ಬರಬೇಕಿದ್ದ ಸಂಬಳ ಕಳೆದ ಮೂರು ತಿಂಗಳಿನಿಂದ ಬಂದಿಲ್ಲ. ಇದರಿಂದ ನೌಕರರು ಪರದಾಡುವಂತಾಗಿದ್ದು, ಇನ್ನೊಂದು ತಿಂಗಳಲ್ಲಿ ಮಹಾನಗರ ಪಾಲಿಕೆ ಮುಚ್ಚು ಪರಿಸ್ಥಿತಿ ಬರಲಿದೆ ಎಂದು ಮಹಾನಗರ ಪಾಲಿಕೆ ಸಭಾ ನಾಯಕ ವೀರಣ್ಣ ಸವಡಿ ತಿಳಿಸಿದರು.
ಖಾಯಂ ಪೌರಕಾರ್ಮಿಕರಿಂದ ಹಿಡಿದು ಆಯುಕ್ತರವರೆಗೂ ಸರ್ಕಾರ ಸಂಬಳ ನೀಡುತ್ತಿತ್ತು. ಸರ್ಕಾರ ಈಗ ಪಾಲಿಕೆಗೆ ಪತ್ರ ಬರೆದಿದ್ದು, ಪಾಲಿಕೆ ಜನರಲ್ ಫಂಡ್ ನಿಂದಲೇ ಸಂಬಳ ನೀಡಬೇಕು ಎಂದು ಆದೇಶಿಸಿದೆ. ರಾಜ್ಯ ಸರ್ಕಾರದ ದಿವಾಳಿಯಾಗಿದೆ ಎಂಬುವುದಕ್ಕೆ ಇದು ಸಾಕ್ಷಿ ಎಂದು ಆರೋಪಿಸಿದರು.
15 ನೇ ಹಣಕಾಸು, ಎಸ್.ಎಫ್. ಸಿ ಮುಕ್ತನಿಧಿ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ, ಪಾಲಿಕೆ ಬಾಕಿ ಪಿಂಚಣಿ, ಅಮೃತ ಯೋಜನೆ ಸೇರಿ 290 ಕೋಟಿ ರೂ. ಸರ್ಕಾರದಿಂದ ಬರಬೇಕಾದ ನ್ಯಾಯವಾದ ಅನುದಾನ ಬಾಕಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಕಾರ್ಯದರ್ಶಿ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸಹ ಸ್ಪಂದಿಸಿಲ್ಲ. ಈಗ ನೌಕರರ ಸಂಬಳ ನೀಡದೆ ಧೋರಣೆ ಮಾಡುತ್ತಿದ್ದಾರೆ ಎಂದು ದೂರಿದರು.
ಪ್ರತಿ ತಿಂಗಳ ಖಾಯಂ ಪೌರ ಕಾರ್ಮಿಕ ಸೇರಿ ಪಾಲಿಕೆ ಎಲ್ಲ ಅಧಿಕಾರಿಗಳಿಗೆ ಸಂಬಳ ನೀಡಲು 7 ಕೋಟಿ ರೂ. ಖರ್ಚಾಗುತ್ತಿದೆ. ಈಗ ಎರಡು ತಿಂಗಳಿನಿಂದ ಸರ್ಕಾರದಿಂದ ಅನುದಾನ ಬಂದಿಲ್ಲ. 21 ಕೋಟಿ ರೂ. ಇನ್ನೂ ಸಂಬಳ ನೀಡಲು ಬಾಕಿ ಇದೆ ಎಂದು ತಿಳಿಸಿದರು.
ಪಾಲಿಕೆ ಸದಸ್ಯ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಮೇಯರ್ ಹಾಗೂ ಸದಸ್ಯರು 2 ವರ್ಷದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳನ್ನು ಸದೃಢ ಮಾಡುವುದು ಸರ್ಕಾರದ ಮೊದಲ ಆದ್ಯತೆ ಆಗಿದೆ. ಆದರೆ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಸರ್ಕಾರದ ನಡೆ ಖಂಡಿಸಿ ಸರ್ವ ಪಕ್ಷದವರು ರಾಜ್ಯಪಾಲರ ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು. ಪಾಲಿಕೆ ಸದಸ್ಯ ಶಿವು ಹಿರೇಮಠ ಇದ್ದರು.