ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರದಲ್ಲಿ ಗೊಂದಲಮಯ ವಾತಾವರಣವಿದ್ದು, ಮನೆಯೊಂದು ಮೂರು ಬಾಗಿಲಾಗಿದೆ. ಗುಂಪುಗಾರಿಕೆ ಇದೆ. ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾದರೂ ಆಶ್ಚರ್ಯವಿಲ್ಲ ಎಂದು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕೋಲಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕೆಟ್ಟ ಸರ್ಕಾರ ತೊಲಗಿ ಒಳ್ಳೆಯ ಸರ್ಕಾರ ಬರಬೇಕು ಎಂದು ಹೇಳಿದ್ದಾರೆ.
ಗ್ಯಾರಂಟಿಗಳನ್ನು ತೊಲಗಿಸಿ ಅಭಿವೃದ್ಧಿ ಕಡೆ ಗಮನ ಕೊಡಿ. ಅನುದಾನ ಇಲ್ಲದೆ ಬರಿಗೈನಲ್ಲಿ ಸಂಸಾರ ಮಾಡುವಂತಾಗಿದೆ. 5 ಗ್ಯಾರಂಟಿ ಘೋಷಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಜನರ ಕಿವಿಗೆ ದಾಸವಾಳ ಹೂ ಇಟ್ಟು ಅಧಿಕಾರಕ್ಕೆ ಬಂತು. ಯಾವ ಶಾಸಕರ ಕ್ಷೇತ್ರಕ್ಕೂ ಅನುದಾನ ಇಲ್ಲದಂತಾಗಿದೆ. ಮನೆಯಲ್ಲಿ ಊಟ ಇಲ್ಲದಿರುವಾಗ ಪಕ್ಕದ ಮನೆಗೆ ಕಳ್ಳತನಕ್ಕೆ ಹೋಗುವಂತಾಗಿದೆ ಪರಿಸ್ಥಿತಿ. ಅದೇ ಕಾರಣಕ್ಕೆ ಎಸ್ಸಿಪಿ, ಟಿಎಸ್ಪಿ ಹಣ ದುರ್ಬಳಕೆ, ವಾಲ್ಮೀಕಿ ನಿಗಮ, ಮುಡಾ ಹಗರಣದಂತ ಹಗರಣ ಆಗುತ್ತಿವೆ ಎಂದಿದ್ದಾರೆ.
500, 600 ಕೋಟಿ ರೂ. ಅದ್ಯಾವ ಅನುದಾನ ಯಾವ ಕ್ಷೇತ್ರಕ್ಕೂ ಬಂದಿಲ್ಲ. ಕೇಂದ್ರ ಸರ್ಕಾರದ ಅನುದಾನ ಬಂದಿದೆ. ಆದರೆ ರಾಜ್ಯ ಸರ್ಕಾರದಿಂದ ಯಾವುದೇ ಕೋಟಿಗಳ ಅನುದಾನ ಬಂದಿಲ್ಲ. ಕೋಲಾರ ಶಾಸಕರು ಸುಧಾ ಮೂರ್ತಿಯವರ ಕೆರೆ ಅಭಿವೃದ್ದಿಗೆ ಕೊಟ್ಟಿರುವ ಅನುದಾನ ಸೇರಿ ಹೇಳಿರಬೇಕು. ಸರ್ಕಾರ ಯಾವುದೇ ತಾರತಮ್ಯ ಇಲ್ಲದೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕಿದೆ ಎಂದು ಹೇಳಿದ್ದಾರೆ.