ಹೊಸ ದಿಗಂತ ವರದಿ,ಅಂಕೋಲಾ:
ಶಿರೂರು ಗುಡ್ಡ ಕುಸಿತದ ಘಟನೆಯಲ್ಲಿ ಮನೆ ಮಾಲಿಕರನ್ನು ಕಳೆದುಕೊಂಡು ಅನಾಥವಾಗಿ ಅದೇ ಸ್ಥಳದಲ್ಲಿ ಕಳೆದ ಸುಮಾರು 29 ದಿನಗಳಿಂದ ಅಲೆಯುತ್ತಿದ್ದ ಲಕ್ಷಣ ನಾಯ್ಕ ಅವರ ಎರಡು ಸಾಕು ನಾಯಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠ ಎಂ.ನಾರಾಯಣ ಅವರು ಸಾಕಲು ತಮ್ಮ ಜೊತೆಗೆ ತೆಗೆದುಕೊಂಡು ಹೋಗಿದ್ದಾರೆ.
ಶಿರೂರು ಗುಡ್ಡ ಕುಸಿತದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹೊಟೇಲ್ ಮತ್ತು ಮನೆ ಹೊಂದಿದ್ದ ಲಕ್ಷ್ಮಣ ನಾಯ್ಕ, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದರು ಆದರೆ ಅವರು ಸಾಕಿರುವ ನಾಯಿಗಳು ಮಾತ್ರ ಅನಾಥವಾಗಿ ಕಾರ್ಯಾಚರಣೆ ಸಂದರ್ಭದಲ್ಲಿ ಮಳೆಯಲ್ಲಿ ಒದ್ದೆಯಾಗಿ ತನ್ನ ಮಾಲಿಕರನ್ನು ಹುಡುಕುತ್ತಿರುವುದು ಬಹಳಷ್ಟು ಬಾರಿ ಗಮನಕ್ಕೆ ಬಂದಿತ್ತು, ಇದೀಗ ಘಟನೆ ನಡೆದು ಸುಮಾರು ಒಂದು ತಿಂಗಳು ಸಮೀಪಿಸುತ್ತ ಬಂದರೂ ನಾಯಿಗಳು ಮಾತ್ರ ಅದೇ ಸ್ಥಳದಲ್ಲಿ ಇರುವುದನ್ನು ಕಂಡ ಜಿಲ್ಲಾ ಪೊಲೀಸ್ ವರಿಷ್ಠರು ಅವುಗಳಿಗೆ ಲಘು ಆಹಾರ ನೀಡಿ ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ದಾರೆ.