ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನೊಯ್ಡಾಕ್ಕೆ ಹೋದರೆ ಸೋಲು ಎಂಬ ಮೂಢನಂಬಿಕೆಯನ್ನು ಮುರಿದ ಮೊದಲ ಮುಖ್ಯಮಂತ್ರಿ(ಉ.ಪ್ರ.ದ ಕೈಗಾರಿಕಾ ಮತ್ತು ವಸತಿ ನಗರ ನೊಯ್ಡಾಕ್ಕೆ ಹೋದರೆ ಮುಂದಿನ ಅವಧಿಯಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ರಾಜಕೀಯ ಮೂಢನಂಬಿಕೆ ಸೃಷ್ಟಿಯಾಗಿತ್ತು. ಆದರೆ ಇದನ್ನು ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು 2018ರ ಡಿ.25ರಂದು ನೊಯ್ಡಾಕ್ಕೆ ಭೇಟಿ ನೀಡಿ ದಿಲ್ಲಿ ಮೆಟ್ರೋದ ಮಜೆಂಟಾ ಲೈನ್ ಉದ್ಘಾಟಿಸುವ ಮೂಲಕ ಸುಳ್ಳು ಮಾಡಿದ್ದಾರೆ. ಆಗ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಸಿಂಗ್ ಯಾದವ್ ಅವರು ಮೋದಿ ಮತ್ತು ಯೋಗಿಯವರು ಮುಂದಿನ ಚುನಾವಣೆಯಲ್ಲಿ ಸೋಲುಣ್ಣಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಆದರೆ 2019ರ ಚುನಾವಣೆಯಲ್ಲಿ ಮೋದಿಯವರು ಇದನ್ನು ಸುಳ್ಳು ಮಾಡಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ್ದರು.)
ಇದಕ್ಕೂ ಮುನ್ನ, ಉ.ಪ್ರ.ಸಿಎಂ ಆಗಿದ್ದ ವೀರ್ ಬಹಾದ್ದೂರ್ ಸಿಂಗ್ ನೊಯ್ಡಾಕ್ಕೆ ಭೇಟಿ ನೀಡಿದ ಕೆಲವೇ ದಿನಗಳಲ್ಲಿ ಅಂದರೆ 1988ರ ಜೂನ್‌ನಲ್ಲಿ ಅಧಿಕಾರ ಕಳೆದುಕೊಂಡಿದ್ದರು. ಅವರ ಉತ್ತರಾಧಿಕಾರಿಯಾಗಿ ಬಂದ ಎನ್.ಡಿ.ತಿವಾರಿ ಅವರು ಕೂಡಾ ನೊಯ್ಡಾಕ್ಕೆ ಭೇಟಿ ನೀಡಿದ ಬಳಿಕ ಅಕಾರ ಕಳೆದುಕೊಂಡಿದ್ದರು. ಅನಂತರ ಎಸ್‌ಪಿ ನಾಯಕ ಮುಲಾಯಂ ಸಿಂಗ್ ಯಾದವ್, ಕಲ್ಯಾಣ್ ಸಿಂಗ್, ರಾಜನಾಥ್ ಸಿಂಗ್(ಅವರು ನೊಯ್ಡಾ ಬದಲಿಗೆ ದಿಲ್ಲಿಯಿಂದಲೇ ದಿಲ್ಲಿ-ನೊಯ್ಡಾ-ದಿಲ್ಲಿ (ಡಿಎನ್‌ಡಿ) ಫ್ಲೈಓವರ್‌ನ್ನು ಉದ್ಘಾಟಿಸಿದ್ದರು), ಅಖಿಲೇಶ್ ಯಾದವ್ (ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಶೃಂಗಸಮ್ಮೇಳನಕ್ಕೆ ಗೈರುಹಾಜರಾಗಿ ನೊಯ್ಡಾ ಕುರಿತ ಭೀತಿ ಹೊರಹಾಕಿದ್ದರೆ, ಆ ಕಾರ್ಯಕ್ರಮದ ಅತಿಥಿಗಳಾಗಿದ್ದ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಕೂಡಾ ನೊಯ್ಡಾ ಭೇಟಿಯನ್ನು ತಪ್ಪಿಸಿಕೊಂಡಿದ್ದರಲ್ಲದೆ, ಅನಂತರ ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿ ಉದ್ಘಾಟನೆಯನ್ನು ನೊಯ್ಡಾ ಬದಲಿಗೆ ಲಖನೌದಿಂದಲೇ ಉದ್ಘಾಟಿಸಿದ್ದರು ! ಅನಂತರ ಮಾಯಾವತಿ ಅವರು ನೊಯ್ಡಾಕ್ಕೆ 2011ರ ಅಕ್ಟೋಬರ್‌ನಲ್ಲಿ ಭೇಟಿ ನೀಡಿದ್ದರಾದರೂ 2012ರ ಚುನಾವಣೆಯಲ್ಲಿ ಸೋಲನುಭವಿಸಿ ಅಧಿಕಾರ ಕಳೆದುಕೊಂಡಿದ್ದರು.