ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ನಿನ್ನೆಗೆ ಅಂತ್ಯಗೊಂಡಿದ್ದು, ಒಟ್ಟು 5,102 ನಾಮಪತ್ರಗಳು ಸಲ್ಲಿಕೆಯಾಗಿವೆ.
ಮತಯುದ್ಧದ ಮೊದಲ ಅಧ್ಯಾಯವಾದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಒಟ್ಟು 3,632 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ಪೈಕಿ 3,327 ಪುರುಷ ಅಭ್ಯರ್ಥಿಗಳಿಂದ 4,710 ನಾಮಪತ್ರ ಸಲ್ಲಿಕೆಯಾಗಿದೆ. ಇನ್ನು 304 ಮಹಿಳಾ ಅಭ್ಯರ್ಥಿಗಳಿಂದ 391 ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಇತರೆಯಿಂದ ಒಂದು ನಾಮಪತ್ರ ಸಲ್ಲಿಸಲಾಗಿದೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ 8 ದಿನಗಳ ಅವಧಿಯಲ್ಲಿ ಬಿಜೆಪಿ ಅಭ್ಯರ್ಥಿಗಳಿಂದ ಒಟ್ಟು 707, ಕಾಂಗ್ರೆಸ್ ಅಭ್ಯರ್ಥಿಗಳಿಂದ 651, ಜೆಡಿಎಸ್ ಅಭ್ಯರ್ಥಿಗಳಿಂದ 455, ಎಎಪಿ ಅಭ್ಯರ್ಥಿಗಳಿಂದ 373, ಬಿಎಸ್ಪಿ ಅಭ್ಯರ್ಥಿಗಳಿಂದ 179, ಸಿಪಿಐಎಂ ಅಭ್ಯರ್ಥಿಯಿಂದ 5, ಎನ್ಪಿಪಿ ಅಭ್ಯರ್ಥಿಗಳಿಂದ 5 ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ನೋಂದಾಯಿತ ಗುರುತಿಸದ ಪಕ್ಷಗಳ ಅಭ್ಯರ್ಥಿಗಳಿಂದ 1007 ಹಾಗೂ ಪಕ್ಷೇತರ ಅಭ್ಯರ್ಥಿಗಳಿಂದ ಒಟ್ಟು 1,720 ನಾಮಪತ್ರಗಳು ಸಲ್ಲಿಕೆಯಾಗಿವೆ.
ಇಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏ.24ರ ವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿರುತ್ತದೆ. ಈವರೆಗೆ ನಾಮಪತ್ರ ಸಲ್ಲಿಕೆಯಲ್ಲಿ ಬ್ಯುಸಿಯಾಗಿದ್ದ ಅಭ್ಯರ್ಥಿಗಳು ಶುಕ್ರವಾರದಿಂದ ಪೂರ್ಣ ಪ್ರಮಾಣದಲ್ಲಿ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರದ ಕಾರ್ಯ ಪ್ರಾರಂಭಿಸಲಿದ್ದಾರೆ.