ಕಾಂಗ್ರೆಸ್ ಬೆಂಬಲಿಗರ ಬೆದರಿಕೆಗೆ ನಾಮಪತ್ರ ವಾಪಾಸ್ ಪಡೆದೆ: ಜೆಡಿಎಸ್ ಗೆ ಕೈ ಕೊಟ್ಟ ಅಲ್ತಾಫ್‌ ಕುಂಪಲ ಆರೋಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರಾವಳಿ ಚುನಾವಣಾ ಅಖಾಡದಲ್ಲೀಗ ಭಾರೀ ಸುದ್ದಿಯಾಗಿರಿಯುವ ಕ್ಷೇತ್ರ ಮಂಗಳೂರು ವಿಧಾನ ಸಭಾ ಕ್ಷೇತ್ರ. ಇಲ್ಲಿನ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾಮಾಜಿಕ ಕಾರ್ಯಕರ್ತ ಅಲ್ತಾಫ್ ಕುಂಪಲ ಅವರನ್ನು ರಾಷ್ಟ್ರೀಯ ಪಕ್ಷದ ಕಾರ್ಯಕರ್ತರು ಬೆದರಿಸಿ ನಾಮಪತ್ರ ಹಿಂಪಡೆಯುವಂತೆ ಮಾಡಿದ್ದಾರೆ ಎಂದು ಪಕ್ಷದ ರಾಜ್ಯ ವಕ್ತಾರ ಎಂ.ಬಿ.ಸದಾಶಿವ ಆರೋಪಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ‌ರಾಜ್ಯದ ನಾಯಕರ ಗಮನಕ್ಕೆ ತಾರದೇ ನಾಮ ಪತ್ರ ವಾಪಾಸ್ ಪಡೆದಿದ್ದಾರೆ. ನಾಮಪತ್ರ ವಾಪಸ್‌ ಪಡೆದ 3 ದಿನಗಳ ಬಳಿಕ ಮಾಧ್ಯಮಗಳ ಮುಂದೆ ಹಾಜರಾಗಿದ್ದಾರೆ.

ಈ ಕುರಿತು ಸೋಮವಾರ ಮಂಗಳೂರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ವಕ್ತಾರ ಎಂ.ಬಿ.ಸದಾಶಿವ, ಘಟನೆಯನ್ನು ಖಂಡಿಸುವುದಾಗಿ ಹೇಳಿದರು. ಇಂತಹ ಘಟನೆಗಳು ಮರುಕಳಿಸಬಾರದು ಎಂದವರು ಕಾಳಜಿ ವ್ಯಕ್ತ ಪಡಿಸಿದರು.

ಅಲ್ತಾಫ್ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಅವರು ಉಳ್ಳಾಲ ಭಾಗದಲ್ಲಿ ಜನಾನುರಾಗಿ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಅದೇ ಆಧಾರದಲ್ಲಿ ಜೆಡಿಎಸ್‌ನಿಂದ ಟಿಕೆಟು ನೀಡಲಾಗಿತ್ತು. ಶುಕ್ರವಾರ ಮಧ್ಯಾಹ್ನ ಅಭ್ಯರ್ಥಿಯನ್ನು ರಾಷ್ಟ್ರೀಯ ಪಕ್ಷದ ಬೆಂಬಲಿಗ ಕಾರ್ಯಕರ್ತರು ಕರೆದೊಯ್ದು ಒತ್ತಡ ಮತ್ತು ಬೆದರಿಕೆ ಹಾಕಿ ಚುನಾವಣಾ ಅಧಿಕಾರಿಗೆ ಉಮೇದ್ವಾರಿಕೆ ಹಿಂದೆ ಪಡೆಯುವ ಪತ್ರ ಕೊಡಿಸಿದ್ದಾರೆ ಎಂದರು.
ಇಂದು ಅಲ್ತಾಫ್ ಚುನಾವಣಾ ಅಕಾರಿಯ ಮುಂದೆ ಹಾಜರಾಗಿ ಸ್ಪರ್ಧಾ ಕಣದಲ್ಲಿ ಮುಂದುವರಿಯಲು ಅವಕಾಶ ಕೇಳಿ ಮನವಿ ಸಲ್ಲಿಸಿದ್ದಾರೆ. ಉಳಿದಂತೆ ಚುನಾವಣಾ ಆಯೋಗ ಮತ್ತು ಕಾನೂನು ರೀತಿಯಲ್ಲಿ ವಿಷಯದ ಕುರಿತಂತೆ ಹೋರಾಟ ಮುಂದುವರಿಸಲಾಗುವುದು ಎಂದು ಎಂ.ಬಿ.ಸದಾಶಿವ ತಿಳಿಸಿದರು.

ಸ್ವಇಚ್ಛೆಯಿಂದ ನಾಮಪತ್ರ ಹಿಂದೆ ಪಡೆದಿಲ್ಲ
ಅಲ್ತಾಫ್ ಕುಂಪಲ ಮಾತನಾಡಿ, ಸ್ವಇಚ್ಛೆಯಿಂದ ನಾಮಪತ್ರ ಹಿಂದೆ ಪಡೆದಿಲ್ಲ. ಕಾಂಗ್ರೆಸ್ ಪಕ್ಷದ ಬೆಂಬಲಿಗರು ಹೆದರಿಸಿರುವುದಕ್ಕೆ ನಾಮಪತ್ರ ವಾಪಸು ಪಡೆದಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೋರಿ ಚುನಾವಣಾ ಅಧಿಕಾರಿಗೆ ಮನವಿ ಮಾಡಿರುತ್ತೇನೆ ಎಂದರು.

ಜೆಡಿಎಸ್‌ಗೆ ಅಧಿಕಾರ
ಕರ್ನಾಟಕ ರಾಜ್ಯದ ಜನತೆ ಜೆಡಿಎಸ್ ಪಕ್ಷದ ಯೋಜನೆಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ರಾಜ್ಯದಲ್ಲಿ ನಡೆದ ಪಂಚರತ್ನ, ಜಲಧಾರೆ ಯಾತ್ರೆಗಳಿಗೆ ನಿರೀಕ್ಷೆ ಮೀರಿದ ಬೆಂಬಲ ವ್ಯಕ್ತವಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಸ್ವಯಂಕೃತ ತಪ್ಪುಗಳಿಂದ ಮುಗ್ಗರಿಸಿವೆ. ರಾಜ್ಯದಲ್ಲಿ ಮೇ ೧೦ರಂದು ನಡೆಯುವ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯ ವಕ್ತಾರ ಎಂ.ಬಿ.ಸದಾಶಿವ ವಿಶ್ವಾಸ ವ್ಯಕ್ತ ಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!