Monday, November 28, 2022

Latest Posts

ನಿತ್ಯಾನಂದ ಸ್ವಾಮೀಜಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದಿಂದ ಪಲಾಯನಗೊಂಡು ಕೈಲಾಸ ಎಂಬ ಸ್ವಂತ ರಾಷ್ಟ್ರವನ್ನು ನಿರ್ಮಿಸಿಕೊಂಡಿರುವ ಬಿಡದಿ ಧ್ಯಾನಪೀಠದ ಮುಖ್ಯಸ್ಥ ನಿತ್ಯಾನಂದ ಸ್ವಾಮೀಜಿ ವಿರುದ್ದ ಮತ್ತೊಮ್ಮೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡುವಂತೆ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ರಾಮನಗರದ ನ್ಯಾಯಾಲಯದ ಮುಂದೆ ಗುರುವಾರ ನಿತ್ಯಾನಂದ ಸ್ವಾಮೀಜಿ ಪ್ರಕರಣ ವಿಚಾರಣೆಗೆ ಬಂದಿತ್ತು. ಲೈಂಗಿಕ ಶೋಷಣೆ ಆರೋಪ ಎದುರಿಸುತ್ತಿರುವ ನಿತ್ಯಾನಂದ ಸ್ವಾಮೀಜಿ ವಿರುದ್ದ 2010ರಲ್ಲಿ ಬಿಡದಿ ಪೊಲೀಸರು ದೂರು ದಾಖಲಿಸಿಕೊಂಡಿದ್ದ ಪ್ರಕರಣ ನ್ಯಾಯಾಲಯದಲ್ಲಿದೆ.

2019ರಲ್ಲಿ ಭಾರತದಿಂದ ಪಲಾಯನಗೈದ ನಿತ್ಯಾನಂದ ಸ್ವಾಮೀಜಿ ತನಗೆ ಜೀವ ಬೆದರಿಕೆ ಇದ್ದು, ಭಾರತ ತೊರೆಯುವುದಾಗಿ ವಿಶ್ವ ಸಂಸ್ಥೆಗೆ ಹೇಳಿಕೊಂಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ನಿತ್ಯಾನಂದಸ್ವಾಮಿ ರಾಮನಗರದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಗೆ ಗೈರಾಗುತ್ತಿದ್ದಾರೆ. ಅಲ್ಲದೆ, ಇವರ ವಿರುದ್ದ ಇಂಟರ್ ಪೋಲ್‌ನಲ್ಲಿ ಬ್ಲೂ ಕಾರ್ನರ್‌ ನೋಟಿಸ್ ಸಹ ಜಾರಿಯಾಗಿದೆ.

2019ರಲ್ಲಿ ಆತ ಭಾರತವನ್ನು ತೊರೆದ ನಂತರ ವಿಚಾರಣೆಗೆ ನಿರಂತರ ಗೈರಾಗುತ್ತಿರುವುದರಿಂದ ನ್ಯಾಯಾಲಯ ಪದೇ ಪದೇ ಜಾಮೀನು ರಹಿತ ವಾರೆಂಟ್ ಹೊರಡಿಸುತ್ತಿದೆ. ಅಲ್ಲದೆ, ನಿತ್ಯಾನಂದ ಸ್ವಾಮೀಜಿಗೆ ಸಿಕ್ಕ ಬೇಲ್‌ಗೆ ಶೂರಿಟಿ ನೀಡಿದ್ದ ವ್ಯಕ್ತಿಯ ವಿರುದ್ಧವೂ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಹಾಗೊಮ್ಮೆ ಶೂರಿಟಿ ನೀಡಿದವರು ನಿತ್ಯಾನಂದ ಸ್ವಾಮೀಜಿಯನ್ನು ಹಾಜರು ಪಡಿಸದಿದ್ದರೆ ಶೂರಿಟಿಗೆ ಕೊಟ್ಟ ಆಸ್ತಿಯನ್ನು ನ್ಯಾಯಾಲಯ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇದೆ ಎಂದೂ ವಕೀಲರು ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆ, ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಮತ್ತೆ ಸೆಪ್ಟೆಂಬರ್‌ 23 ಕ್ಕೆ ಮುಂದೂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!