ಉತ್ತರ ಕೊರಿಯಾದಲ್ಲಿ ಮೊದಲ ಕೊರೋನಾ ಕೇಸ್‌ ಪತ್ತೆ; ರಾಷ್ಟ್ರೀಯ ತುರ್ತುಸ್ಥಿತಿ ಘೋಷಿಸಿದ ಕಿಮ್‌ ಜಾಂಗ್ ಉನ್!

ಹೊಸದಿಗಂತ ಡಿಜಿಟಟಲ್  ಡೆಸ್ಕ್‌
ಉತ್ತರ ಕೊರಿಯಾದಲ್ಲಿ ಮೊತ್ತಮೊದಲ ಬಾರಿಗೆ ಕೋವಿಡ್ -19 ಸೋಂಕು ಪ್ರಕರಣ ಪತ್ತೆಯಾಗಿದೆ. ಸೋಂಕು ಪ್ರಸರಣವಾಗುವುದನ್ನು ತಡೆಯಲು ದೇಶಾದ್ಯಂತ “ತೀವ್ರ ರಾಷ್ಟ್ರೀಯ ತುರ್ತುಸ್ಥಿತಿ” ಘೋಷಿಸಲಾಗಿದೆ. ದೇಶದ ನಾಯಕ ಕಿಮ್ ಜಾಂಗ್ ಉನ್ ವೈರಸ್ ಅನ್ನು “ನಿರ್ಮೂಲನೆ ಮಾಡಲು” ಪ್ರತಿಜ್ಞೆ ಮಾಡಿದ್ದಾರೆ ಎಂದು ದೇಶದ ಸರ್ಕಾರಿ ಮಾಧ್ಯಮ ಗುರುವಾರ ತಿಳಿಸಿದೆ.
ಬಡ, ಪರಮಾಣು ಸಶಸ್ತ್ರ ರಾಷ್ಟವಾದ ಉತ್ತರ ಕೊರಿಯಾ ಒಂದೇ ಒಂದೂ ಕೋವಿಡ್ -19 ಪ್ರಕರಣ ಪತ್ತೆಯಾಗಿಲ್ಲ ಎಂದು ಈವರೆಗೆ ಪ್ರತಿಪಾದಿಸಿತ್ತು. 2020 ರಲ್ಲಿ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಸರ್ಕಾರವು ತನ್ನ ಗಡಿಗಳಲ್ಲಿ ಕಠಿಣವಾದ ಕರೋನವೈರಸ್ ದಿಗ್ಬಂಧನವನ್ನು ವಿಧಿಸಿದೆ.
ಆದರೆ ರಾಜಧಾನಿಯಲ್ಲಿ ಜ್ವರದಿಂದ ಬಳಲುತ್ತಿರುವ ರೋಗಿಯೊಬ್ಬನಿಂದ ಸಂಗ್ರಹಿಸಲಾದ ಮಾದರಿ ಪರೀಕ್ಷಿಸಿದಾಗ ಓಮಿಕ್ರಾನ್ ರೂಪಾಂತರಿ ಕಾಣಿಸಿಕೊಂಡಿರಿವುದು ದೃಢಪಟ್ಟಿದೆ ಎಂದು ಕೇಂದ್ರ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸೋಂಕು ಪತ್ತೆಯಾಗುತ್ತಲೇ ನಾಯಕ ಕಿಮ್ ಜಾಂಗ್ ಉನ್ ಸೇರಿದಂತೆ ಉನ್ನತ ಅಧಿಕಾರಿಗಳು ಏಕಾಏಕಿ ಚರ್ಚಿಸಲು ಬಿಕ್ಕಟ್ಟಿನ ಪೊಲಿಟ್‌ಬ್ಯೂರೋ ಸಭೆಯನ್ನು ನಡೆಸಿದರು ಮತ್ತು ಅವರು “ತುರ್ತು ವೈರಸ್ ನಿಯಂತ್ರಣʼ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಘೋಷಿಸಿದರು. ಕಡಿಮೆ ಅವಧಿಯಲ್ಲಿ ಸಾಂಕ್ರಾಮಿಕದ ಮೂಲವನ್ನು ತೊಡೆದುಹಾಕುವುದು ನಮ್ಮ ಗುರಿಯಾಗಬೇಕಿದೆ ಎಂದು ಕಿಮ್ ಸಭೆಗೆ ತಿಳಿಸಿದರು.
ಕಿಮ್ ಬಿಗಿಯಾದ ಗಡಿ ನಿಯಂತ್ರಣಗಳು ಮತ್ತು ಲಾಕ್‌ಡೌನ್ ಕ್ರಮಗಳಿಗೆ ಕರೆ ನೀಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ಮತ್ತು ರಷ್ಯಾದಿಂದ ಲಸಿಕೆಗಳ ಪ್ರಸ್ತಾಪಗಳನ್ನು ತಿರಸ್ಕರಿಸಿದ ಉತ್ತರ ಕೊರಿಯಾ ತನ್ನ 25 ಮಿಲಿಯನ್ ಜನರಲ್ಲಿ ಯಾರಿಗೂ ಲಸಿಕೆ ಹಾಕಿಲ್ಲ ಎಂದು ತಜ್ಞರು ಹೇಳುತ್ತಾರೆ. ಜನವರಿ 3 2020 ರಿಂದ ಈ ವರ್ಷದ ಮೇ 11 ರವರೆಗೆ, ಉತ್ತರ ಕೊರಿಯಾದಲ್ಲಿ ಶೂನ್ಯ ಪ್ರಕರಣ ಮತ್ತು ಶೂನ್ಯ ಸಾವುಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಹ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!