ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ 288 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಈಗ ಒಡಿಶಾದ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ಸಾವಿನ ಸಂಖ್ಯೆಯ ಬಗ್ಗೆ ಸ್ಪಷ್ಟನೆ ನೀಡಿದ್ದು, ಅಪಘಾತದಲ್ಲಿ ಸಾವನ್ನಪ್ಪಿದವರು 288 ಮಂದಿಯಲ್ಲ 275 ಜನರು ಎಂದು ಹೇಳಿದ್ದಾರೆ.
ಡಿಎಂ ಡೇಟಾವನ್ನ ಪರಿಶೀಲಿಸಿದ್ದು, ಕೆಲವು ಶವಗಳನ್ನ ಎರಡು ಬಾರಿ ಎಣಿಸಲಾಗಿದೆ ಎಂದು ಕಂಡುಬಂದಿದೆ. ಹಾಗಾಗಿ ಸಾವಿನ ಸಂಖ್ಯೆಯನ್ನ 275ಕ್ಕೆ ಪರಿಷ್ಕರಿಸಲಾಗಿದೆ. ಈ 275 ಶವಗಳ ಪೈಕಿ 88 ಶವಗಳನ್ನ ಗುರುತಿಸಲಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಒಡಿಶಾದ ಬಾಲಸೋರ್ನಲ್ಲಿ ಮೂರು ರೈಲುಗಳು ಡಿಕ್ಕಿಯಾಗಿರುವುದರಿಂದ ಸಂಭವಿಸಿದ ದೊಡ್ಡ ಅಪಘಾತದ ನಿಜವಾದ ಕಾರಣವನ್ನ ವಿವರಿಸಿದರು. ಅದನ್ನ ಶೀಘ್ರದಲ್ಲೇ ವರದಿಯಲ್ಲಿ ಬಹಿರಂಗಪಡಿಸಲಾಗುವುದು ಎಂದು ರೈಲ್ವೆ ಸಚಿವರು ಹೇಳಿದ್ದಾರೆ.
ಈ ಅಪಘಾತದಲ್ಲಿ 1100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದು ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿ ಸಂಭವಿಸಿದ ಅತಿದೊಡ್ಡ ರೈಲು ಅಪಘಾತವಾಗಿದೆ.
ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ನಿಲ್ದಾಣದಲ್ಲಿ ಎರಡು ಪ್ಯಾಸೆಂಜರ್ ರೈಲುಗಳು ಮತ್ತು ಗೂಡ್ಸ್ ರೈಲು ಮೂರು ವಿಭಿನ್ನ ಹಳಿಗಳಲ್ಲಿ ಡಿಕ್ಕಿ ಹೊಡೆದಿದ್ದು, ಒಟ್ಟು 17 ಬೋಗಿಗಳು ಹಳಿ ತಪ್ಪಿವೆ ಮತ್ತು ಗಂಭೀರ ಹಾನಿಯಾಗಿದೆ.