ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ದೊರಕದ ಕಾರಣ ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ್ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಉತ್ತಮ ಸಚಿವನಾಗುತ್ತೇನೆ ಎಂದು ಜನ ಹೇಳುತ್ತಾರೆ. ಆದರೆ ಹೇಳಬೇಕಾದವರು ಏನೂ ಹೇಳುತ್ತಿಲ್ಲ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅತೀವ ಬೇಸರವಾಗಿದೆ. ಗಾಡ್‌ಫಾದರ್ ಇಲ್ಲದವರು ಸಚಿವರಾಗೋದು ಕಷ್ಟ ಎಂದಿದ್ದಾರೆ. ಎಷ್ಟೇ ಉತ್ತಮ ಕಾರ್ಯಗಳನ್ನು ಮಾಡಿದರೂ, ಜನರ ಪ್ರೀತಿ ಗಳಿಸಿದ್ದರೂ ಸಚಿವನಾಗೋಕೆ ಸಾಧ್ಯವಾಗಿಲ್ಲ ಎಂದಿದ್ದಾರೆ.
ನಾನು ರೈತನ ಮಗ, ರಾಜಕೀಯದ ಬ್ಯಾಕ್‌ಗ್ರೌಂಡ್ ಇಲ್ಲ
ರಾಜಕೀಯದಲ್ಲಿ ಸಾಮಾನ್ಯರು ಮೇಲಕ್ಕೆ ಬರೋದು ಕಷ್ಟ. ನಾನು ರೈತನ ಮಗ, ನನಗೆ ಯಾವುದೇ ರಾಜಕೀಯದ ಬ್ಯಾಕ್‌ಗ್ರೌಂಡ್ ಇಲ್ಲ. ನಮ್ಮಂತವರು ಮೇಲಕ್ಕೆ ಬರೋದು ಅಸಾಧ್ಯ. ಜನರ ತಲೆ ಒಡೆದು ಹಣ ಸಂಪಾದನೆ ಮಾಡಿರುವಂತವರು ಮಾತ್ರ ಮೇಲಕ್ಕೆ ಬರ್ತಾರೆ. ಜಗಳ ಮಾಡಿ ನನಗೆ ಸ್ಥಾನ ಬೇಕೇಬೇಕು ಎಂದು ಹಠ ಮಾಡೋಕೆ ಆಗೋದಿಲ್ಲ ಎಂದಿದ್ದಾರೆ.
ರಾಜಕೀಯ ಅಂದ್ರೆ ಡಬಲ್‌ಗೇಮ್
ನಾನು ಜನಉಪಯೋಗಿ ಕೆಲಸಗಳನ್ನು ಮಾಡಿಕೊಂಡು ಕುಳಿತಿದ್ದೆ. ರಾಜಕೀಯ ಅಂದರೆ ಜನರು ಹಾಗೂ ಅವರ ಒಳಿತು ಎಂದು ತಿಳಿದುಕೊಂಡಿದ್ದೆ. ಆದರೆ ಇದೀಗ ಹೊಸ ಪಾಠ ಕಲಿತಿದ್ದೇನೆ. ಪ್ರಾಮಾಣಿಕತೆಗೆ ಯಾವುದೇ ಬೆಲೆ ಇಲ್ಲ. ರಾಜಕೀಯ ಅಂದ್ರೆ ಡಬಲ್ ಗೇಮ್ ಹಾಗೂ ಮೋಸ ಅಷ್ಟೆ. ನಮ್ಮ ಜಿಲ್ಲೆಗೆ ಇನ್ನೊಂದು ಅವಕಾಶ ಕೊಡಬಹುದಿತ್ತು. ನಾನು ಬಡವ, ನನ್ನ ಕೋಪ ದವಡೆಗೆ ಮೂಲ ಅಷ್ಟೆ. ಸಮಯ ಇದೆ ನೋಡೋಣ. ಕೆಎಸ್‌ಆರ್‌ಟಿಸಿ ನಷ್ಟದಲ್ಲಿ ಇದೆ. ಏನೂ ಸಾಧನೆ ಮಾಡಲು ಆಗಲ್ಲ. ಹಾಗಾಗಿ ನಾನು ನಾಳೆ ಹೋಗಿ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ತಿಳಿಸಿದರು.



