ಹೊಸದಿಗಂತ ವರದಿ ,ಹುಬ್ಬಳ್ಳಿ:
ಸಿಎಂ ತಮ್ಮ ಮೇಲಿನ ಮುಡಾ ಹಗರಣದಿಂದ ನುಣುಚಿಕೊಳ್ಳಲು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮೇಲಿನ 15ಕ್ಕೂ ಹೆಚ್ಚು ಪ್ರಕರಣಗಳ ದಾಖಲೆಗಳನ್ನು ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದ್ಯಾವ ಗೊಡ್ಡು ಬೆದರಿಕೆಗಳಿಗೆ ನಾವು ಹೆದರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹರಿಹಾಯ್ದರು.
ಶುಕ್ರವಾರ ಶಾಸಕ ಅರವಿಂದ ಬೆಲ್ಲದ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಇವರು ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಇದ್ದಾಗ ಅವರ ಮೇಲೆ ೩೩ ಪ್ರಕರಣ ದಾಖಲಿಸಿದ್ದರು. ಈಗ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಕಾಂಗ್ರೆಸ್ ನಾಯಕರು ಮಾಡುತ್ತಿದ್ದು, ತಾಕತ್ತು ಇದ್ದರೆ ದಾಖಲೆಗಳ ಬಿಡುಗಡೆ ಮಾಡಲಿ ಎಂದರು.
ಮುಡಾ ಹಗರಣದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಖಚಿತ. ಏಕೆಂದರೆ ಮುಡಾ ಹಾಗೂ ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ನೇರವಾಗಿ ಶಾಮೀಲ ಆಗಿದ್ದಾರೆ ಎಂದು ಆರೋಪಿಸಿದರು.
ಮುಡಾ ಹಗರಣದಲ್ಲಿ ಸಿಎಂ ಅವರು ಭಾಗಿಯಾಗಿದ್ದು, ದೆಹಲಿ ಮಟ್ಟದಲ್ಲಿ ಚರ್ಚೆ ಆಗಿದೆ. ಇದ್ದರಿಂದ ಸಿದ್ದರಾಮಯ್ಯ ಶಾಸಕರ ಸಭೆ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಪಕ್ಷದ ಹೈಕಮಾಂಡ ಅವರ ಬದಲಾವಣೆ ಮಾಡುವುದು ಬಗ್ಗೆ ಆಲೋಚಿಸುತ್ತಿದ್ದಾರೆ. ಆದ್ದರಿಂದ ಅವರು ದೆಹಲಿ ನಾಯಕ ಭೇಟಿಗೆ ಹೋಗಿದ್ದಾರೆ ಎಂದರು.