ಕಾಂಗ್ರೆಸ್ ನಾಯಕರ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ: ‘ಕೈ’ ವಿರುದ್ಧ ಬಿ.ವೈ.ವಿಜಯೇಂದ್ರ ಕಿಡಿ

ಹೊಸದಿಗಂತ ಮೈಸೂರು;

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಪರದಾಡುತ್ತಿರುವ ರಾಜ್ಯ ಸರ್ಕಾರ, 24 ಸಾವಿರ ಕೋಟಿರೂಗಳನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಿಕೆ ಮಾಡಿದೆ. ಹಾಲಿನ ಪ್ರೋತ್ಸಾಹ ಧನ 680 ಕೋಟಿರೂಗಳನ್ನು ರೈತರಿಗೆ ನೀಡಿದೆ ಬಾಕಿ ಉಳಿಸಿಕೊಂಡಿದೆ.

ಇದರಿಂದಾಗಿ ಹಾಲು ಉತ್ಪಾಧಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯೂನಿಟ್‌ಗೆ 4 ರೂ ಇದ್ದ ವಿದ್ಯುತ್ ದರವನ್ನು 8 ರೂ.ಗೆ ಏರಿಸಿದ್ದಾರೆ. ಮೊದಲಾದರೆ ರೈತರು ಟಿಸಿಗಳನ್ನು ಬದಲಾಯಿಸಲು ಕೇವಲ 25 ಸಾವಿರ ರೂ.ಗಳನ್ನು ಖರ್ಚು ಮಾಡುತ್ತಿದ್ದರು. ಆದರೆ ಕಾಂಗ್ರೆಸ್ ಸರ್ಕಾರದ ಆಡಳಿತ ಧೋರಣೆಯಿಂದಾಗಿ ಈಗ ಟಿಸಿ ಪಡೆಯಲು 3 ಲಕ್ಷರೂ.ಗೂ ಹೆಚ್ಚು ಹಣವನ್ನು ರೈತರು ಕೊಡುವಂತಾಗಿದೆ.

ಕೇಂದ್ರ ಸರ್ಕಾರ ರೈತರಿಗೆ ಆದಾಯ ಹೆಚ್ಚಿಸಲೆಂದು ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡುತ್ತಿದ್ದ ಹಣವನ್ನೂ ಕೂಡ ನಿಲ್ಲಿಸಿದ್ದಾರೆ. ಅದೇ ರೀತಿ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆಂದು ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನೂ ಕೂಡ ಕಾಂಗ್ರೆಸ್ ಸರ್ಕಾರ ಇನ್ನೂ ಕೊಟ್ಟಿಲ್ಲ, ನಿಲ್ಲಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಸೌಲಭ್ಯಗಳನ್ನು ನೀಡುತ್ತಿದ್ದೇವೆ ಎಂದು ಹೇಳಿ ಒಂದು ಕೈಯಲ್ಲಿ ಕಿತ್ತುಕೊಂಡು, ಮತ್ತೊಂದು ಕೈಯಲ್ಲಿ ನೀಡುತ್ತಿದ್ದಾರೆ ಎಂದು ದೂರಿದರು.

ಸೋಲುವ ಭೀತಿಯಿಂದ ಹತಾಶೆಗೊಂಡಿದ್ದಾರೆ ಲೋಕಸಭೆ ಚುನಾವಣೆಯಲ್ಲಿ 18 ರಿಂದ 20 ಸ್ಥಾನವನ್ನು ಗೆಲ್ಲುವುದಾಗಿ ಮೊದಲು ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿದ್ದಾರೆ. ಆದರೆ ಈಗ ಆ ಭ್ರಮೆ ಕಳಚಿ, ವಾಸ್ತವದ ಸ್ಥಿತಿ ಗೊತ್ತಾಗುತ್ತಿದ್ದಂತೆ ಹತಾಶೆಗೊಂಡಿದ್ದಾರೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ನೀಡುತ್ತಿರುವ ಹೇಳಿಕೆಗಳನ್ನು ನೋಡಿದರೆ ತಮ್ಮ ಶಕ್ತಿ ಕುಸಿಯುತ್ತಿದೆ ಎಂದು ಅವರಿಗೆ ಕಾಡುತ್ತಿರಬೇಕು. ಹಾಗಾಗಿ ಕಾಂಗ್ರೆಸ್‌ನವರು ಲೋಕಸಭೆ ಚುನಾವಣೆಯಲ್ಲಿ ಹಣ, ಹೆಂಡ, ದಬ್ಬಾಳಿಕೆಯ ಬಲದಿಂದ ಚುನಾವಣೆಯನ್ನು ಗೆಲ್ಲಲು ಹೊರಟಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ದಬ್ಬಾಳಿಕೆ ನಡೆಸಿದ್ದಾರೆ. ಮುಂದೆಯೂ ಕೂಡ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಬಹುದು. ಗೊಡ್ಡು ಬೆದರಿಕೆ ಹಾಕಬಹುದು. ಆದರೆ ಇದಕ್ಕೆ ನಾವ್ಯಾರು ಹೆದರುವುದಿಲ್ಲ. ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ಗುಡುಗಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!