January17, 2026
Saturday, January 17, 2026
spot_img

ವೇದಿಕೆ ಮೇಲೆ ಭಾಷಣ ಮಾತ್ರವಲ್ಲ, ಬೀದಿಯಲ್ಲಿ ಬಾವುಟ ಕಟ್ಟಿದ ಇತಿಹಾಸ ನನ್ನದು: ಡಿಕೆಶಿ ಮನದಾಳದ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್:

“ನಾನು ಕೇವಲ ವೇದಿಕೆಗಳ ಮೇಲೆ ಭಾಷಣ ಬಿಗಿಯುವ ನಾಯಕನಲ್ಲ, ಪಕ್ಷಕ್ಕಾಗಿ ನೆಲದ ಮೇಲೆ ನಿಂತು ಕಸ ಗುಡಿಸಿದ ಸಾಮಾನ್ಯ ಕಾರ್ಯಕರ್ತ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ರಾಜಕೀಯ ಹಾದಿಯ ಸ್ಮರಣೆ ಮಾಡಿದರು.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ, ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಘಟನಾತ್ಮಕ ಹೋರಾಟದ ದಿನಗಳನ್ನು ಮೆಲುಕು ಹಾಕಿದರು.

“ನಾನು ಈ ಜೀವನವಿಡೀ ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿಯೇ ಇರಲು ಬಯಸುತ್ತೇನೆ. ಪದವಿ ಯಾವುದಿದ್ದರೂ ನಾನು ಮೂಲತಃ ಒಬ್ಬ ವರ್ಕರ್,” ಎಂದು ಅವರು ಹೆಮ್ಮೆಯಿಂದ ಹೇಳಿದರು.

ಅಧ್ಯಕ್ಷನಾದಾಗ ಮಾತ್ರವಲ್ಲ, ಆರಂಭದ ದಿನಗಳಿಂದಲೂ ಪಕ್ಷದ ಬಾವುಟಗಳನ್ನು ಕಟ್ಟುವುದು, ಗೋಡೆಗಳಿಗೆ ಪೋಸ್ಟರ್‌ಗಳನ್ನು ಅಂಟಿಸುವುದು ಸೇರಿದಂತೆ ಪ್ರತಿಯೊಂದು ಸಣ್ಣ ಕೆಲಸವನ್ನೂ ಸ್ವತಃ ಮಾಡಿದ್ದೇನೆ ಎಂದು ತಿಳಿಸಿದರು.

“ಕಾಂಗ್ರೇಸ್ ಪಕ್ಷದ ಏಳಿಗೆಗಾಗಿ ಯಾವ ಕೆಲಸ ಬೇಕಿದ್ದರೂ ನಾನು ಮಾಡಿದ್ದೇನೆ. ಕಸ ಗುಡಿಸುವುದಕ್ಕೂ ನಾನು ಹಿಂದೆ ಸರಿದಿಲ್ಲ,” ಎನ್ನುವ ಮೂಲಕ ಶಿಸ್ತಿನ ಕಾರ್ಯಕರ್ತನಾಗಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು.

ಒಟ್ಟಾರೆ, ತಮ್ಮ ರಾಜಕೀಯ ಯಶಸ್ಸಿನ ಹಿಂದೆ ದಶಕಗಳ ಕಠಿಣ ಪರಿಶ್ರಮ ಮತ್ತು ಪಕ್ಷದ ಮೇಲಿರುವ ನಿಷ್ಠೆ ಅಡಗಿದೆ ಎಂಬ ಸಂದೇಶವನ್ನು ಡಿ.ಕೆ. ಶಿವಕುಮಾರ್ ಅವರು ಈ ಮೂಲಕ ರವಾನಿಸಿದ್ದಾರೆ.

Must Read

error: Content is protected !!