ಸಿದ್ದರಾಮಯ್ಯನ ಆಡಳಿತ ಜನರಿಗಷ್ಟೇ ಅಲ್ಲ, ಅವರ ಪಕ್ಷದ ನಾಯಕರಿಗೇ ತೃಪ್ತಿಯಿಲ್ಲ-ಬಿಜೆಪಿ ಟ್ವೀಟ್‌ ವಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಿದ್ದರಾಮಯ್ಯ ಆಡಳಿತದಿಂದ ರಾಜ್ಯದ ಜನರಿಗಷ್ಟೇ ಅಲ್ಲ, ಸ್ವಂತ ಪಕ್ಷದ ನಾಯಕರಿಗೂ ತೃಪ್ತಿಯಿಲ್ಲ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ. ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ʻಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ರಾಜ್ಯದ ಆರು ಕೋಟಿ ಕನ್ನಡಿಗರು ನೆಮ್ಮದಿಯಲ್ಲಿಲ್ಲ ಎಂಬುದು ಎಷ್ಟು ಸತ್ಯವೋ, ಕೈ ಪಕ್ಷದ ನಾಯಕರಿಗೂ ಸಿದ್ದರಾಮಯ್ಯನವರ ಆಡಳಿತ ತೃಪ್ತಿ ತಂದಿಲ್ಲʼ ಎಂಬುದೂ ಅಷ್ಟೇ ಸತ್ಯ.

ಚುನಾವಣೆಗೂ ಮುನ್ನ ಸಿದ್ದರಾಮಯ್ಯರವರು, ತಮ್ಮದು “ಸರ್ವ ಜನಾಂಗದ ಶಾಂತಿಯ ತೋಟ” ಎಂದು ಹೇಳಿದ್ದು ಸಂಪೂರ್ಣ ಸುಳ್ಳು ಎಂಬುದು ಅವರ ನಾಲ್ಕು ತಿಂಗಳ ಆಡಳಿತದಲ್ಲಿ ಸಾಬೀತಾಗಿದೆ. ಜಾತಿ ರಾಜಕಾರಣವನ್ನೇ ಅಸ್ತ್ರ ಮಾಡಿಕೊಂಡಿರುವ ಅವರು ಕೆಲವೇ ಆಯ್ದ ಜನಾಂಗಕ್ಕೆ ಅನುಕೂಲ ಮಾಡಿ ಉಳಿದವರನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂಬುದು ಅವರದೇ ಪಕ್ಷದ ನಾಯಕರು ನುಡಿದಿರುವ ಸತ್ಯ.

“ಚುನಾವಣಾ ಪೂರ್ವದಲ್ಲಿ ಅಹಿಂದ ಎಂಬ ದಾಳವುರುಳಿಸಿ ರಾಜಕೀಯ ಲಾಭ ಪಡೆದುಕೊಳ್ಳುವ ಸಿದ್ದರಾಮಯ್ಯರವರು, ಚುನಾವಣೆಯ ನಂತರ ಹಿಂದುಳಿದವರನ್ನು ಬಿಟ್ಟು, ತಾವು ಮತ್ತು ತಮ್ಮವರನ್ನು ಮಾತ್ರ ಮುಂದಕ್ಕೆ ಒಯ್ಯತ್ತಾರೆ” ಎಂದು ಬಿ.ಕೆ.ಹರಿಪ್ರದಾಸ್ ತುಂಬಿದ ಸಭೆಯಲ್ಲಿ ಗಟ್ಟಿ ಧ್ವನಿಯಲ್ಲಿ ಹೇಳಿ ಸಿದ್ದರಾಮಯ್ಯರವರ ಒಳಗುಣವನ್ನು ಹೊರಹಾಕಿದ್ದಾರೆ. ಸಿದ್ದರಾಮಯ್ಯರವರ ಅಸಮಾಧಾನ ಹಿಂದುಳಿದ ವರ್ಗಗಳ ನಾಯಕರ ಮೇಲೆ ಮಾತ್ರವಲ್ಲ, ರಾಜ್ಯದ ಹಿಂದುಳಿದ ವರ್ಗಗಳ ಮೇಲೆಯೂ ಅವರ ಅಸಮಾಧಾನ ಜೋರಾಗಿದೆ. ಹಿಂದುಳಿದ ವರ್ಗಗಳನ್ನು ಬಜೆಟ್‌ನಲ್ಲಿ ಕಡೆಗಣಿಸಲು ಇದೇ ಕಾರಣ. ರಾಜ್ಯದ ಪ್ರಮುಖ ಹಿಂದುಳಿದ ಸಮುದಾಯಗಳಾದ ತಿಗಳ, ಮಡಿವಾಳ, ಉಪ್ಪಾರ, ಬಲಿಜ ಸೇರಿದಂತೆ ಇತರ ಸಮುದಾಯಗಳಿಗೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ನಿಗಮಗಳ ಭಾಗ್ಯವಿಲ್ಲ, ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ದಿ ನಿಗಮಕ್ಕೆ ಬಿಡಿಗಾಸಿನ ಅನುದಾನವಿಲ್ಲ, ಇನ್ನು ಅತಿ ಸಣ್ಣ ಹಿಂದುಳಿದ ವರ್ಗಗಳಿಗೆ ಅಭಿವೃದ್ಧಿ ನಿಗಮವೂ ಇಲ್ಲ, ಅನುದಾನವೂ ಇಲ್ಲ. ಇದು ಸಿದ್ದರಾಮಯ್ಯರವರು ಹಿಂದುಳಿದ ವರ್ಗಗಳಿಗೆ ನೀಡಿದ ಮಹಾನ್‌ ಕೊಡುಗೆ! ಎಂದು ಹರಿಹಾಯ್ದಿದೆ. 

ಮತ್ತೊಬ್ಬರನ್ನು ರಾಜಕೀಯವಾಗಿ ತುಳಿಯುವ ಗುಣವುಳ್ಳ ಸಿಎಂ 2013ರಲ್ಲಿ ಕೊರಟಗೆರೆಯಲ್ಲಿ ಪರಮೇಶ್ವರ್‌ ಸೋಲುವಂತೆ ನೋಡಿಕೊಂಡಿದ್ದೂ ಅಲ್ಲದೆ, ಇದೀಗ ಅವರ ಗೃಹ ಇಲಾಖೆಗೆ ಉಳಿದವರು ಹಸ್ತಕ್ಷೇಪ ಮಾಡಲು ಕುಮ್ಮಕ್ಕು ನೀಡಿ ಉದ್ದೇಶಪೂರ್ವಕವಾಗಿ ಪರಮೇಶ್ವರರನ್ನು ಡಮ್ಮಿ ಮಂತ್ರಿ ಮಾಡಿ ಕೂರಿಸಿದ್ದಾರೆ.

ವಿಪಕ್ಷ ಸ್ಥಾನದ ಹುದ್ದೆಗೆ ಅಡ್ಡಗಾಲಾಗಿದ್ದರು ಎಂಬ ಏಕೈಕ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆಯವರನ್ನು ಲೋಕಸಭೆಗೆ ಕಳುಹಿಸಿದ ಸ್ವಾರ್ಥಿ ಸಿದ್ದರಾಮಯ್ಯರವರು. ಇನ್ನು ರಾಜ್ಯದ ವೀರಶೈವ-ಲಿಂಗಾಯತ ಸಮುದಾಯದ ವಿರುದ್ದವಂತೂ ಪದೇ ಪದೇ ದ್ವೇಷ ಕಾರಿಕೊಳ್ಳುವ ಸಿಎಂ ಸಿದ್ದರಾಮಯ್ಯರವರು, ಚುನಾವಣೆಗೂ ಮುನ್ನ, ವೀರಶೈವ-ಲಿಂಗಾಯತರೆಲ್ಲರೂ ಭ್ರಷ್ಟರು ಎಂದು ಜರಿದಿದ್ದನ್ನು ರಾಜ್ಯದ ಜನ ಇನ್ನೂ ಮರೆತಿಲ್ಲ ಎಂಬುದನ್ನು ಸಿದ್ದರಾಮಯ್ಯರವರು ಅರಿತುಕೊಳ್ಳುವುದು ಒಳಿತು.

ಈಗ ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ಅಧಿಕಾರಿಗಳನ್ನು ಕಡೆಗಣಿಸುತ್ತಿದ್ದಾರೆ ಎಂಬ ನಿಷ್ಠುರ ಸತ್ಯವನ್ನು ಕಾಂಗ್ರೆಸ್‌ನ ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪನವರು ದೂರಿದ್ದಾರೆ. ವೀರಶೈವ-ಲಿಂಗಾಯತ ಸಮುದಾಯದವರಿಗೆ ಸಿಎಂ ಕುರ್ಚಿ ನೀಡಿ ಎನ್ನುವ ಮೂಲಕ ಸಿದ್ದರಾಮಯ್ಯರವರ ನಾಯಕತ್ವದಲ್ಲಿ ತಮಗೆ ನಂಬಿಕೆ ಹಾಗೂ ವಿಶ್ವಾಸವಿಲ್ಲ ಎಂಬ ಸತ್ಯವನ್ನು ಪುನರುಚ್ಛರಿಸಿದ್ದಾರೆ.

ತಮ್ಮ ಸಮುದಾಯ ಸಣ್ಣ ಸಂಖ್ಯೆಯಲ್ಲಿರುವ ಕಾರಣ ತಮಗೆ ಮಂತ್ರಿ ಸ್ಥಾನ ತಪ್ಪಿತು ಎಂಬುದನ್ನು ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿಯವರು ನೋವು ತೋಡಿಕೊಂಡಿದ್ದು, ಸಣ್ಣ ದಲಿತ ಸಮುದಾಯಗಳಿಗೆ ಸಿದ್ದರಾಮಯ್ಯರವರ ಮಂತ್ರಿ ಮಂಡಲದಲ್ಲಿ ಸ್ಥಾನವಿಲ್ಲ ಎಂಬುದಕ್ಕಿದು ಸ್ಪಷ್ಟ ನಿದರ್ಶನ. ಒಟ್ಟಿನಲ್ಲಿ ಸಿದ್ದರಾಮಯ್ಯರವರ ನಾಯಕತ್ವ ಮತ್ತವರ ತುಷ್ಟೀಕರಣದ ರಾಜಕಾರಣ ಹಾಗೂ ಸ್ವಜನಪಕ್ಷಪಾತದಿಂದ ಕೈ ಪಕ್ಷದ ನಾಯಕರೇ ರೋಸಿ ಹೋಗಿರುವುದು ಅವರ ಹೇಳಿಕೆಗಳಿಂದಲೇ ಸಾಬೀತಾಗುತ್ತಿದೆ ಎಂದು ಸಿದ್ದರಾಮಯ್ಯನವರ ಮಲತಾಯಿ ಧೋರಣೆ ವಿರುದ್ಧ ಬಿಜೆಪಿ ಗುಡುಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!