ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಸ್ತಾರಾ ಮತ್ತು ಏರ್ ಇಂಡಿಯಾನಡುವಿನ ಬಹು ನಿರೀಕ್ಷಿತ ವಿಲೀನವು ನವೆಂಬರ್ 11 ಮಧ್ಯರಾತ್ರಿ 12ರ ವೇಳೆಗೆ ಅಂತಿಮಗೊಳ್ಳಲಿದೆ.
ಹೀಗಾಗಿ ನ.11ರ ಬಳಿಕ ವಿಸ್ತಾರಾ ವಿಮಾನಗಳು ಏರ್ ಇಂಡಿಯಾ ಬ್ರ‍್ಯಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಇದರಿಂದ ಸೆ.3ರಿಂದ ವಿಸ್ತಾರಾ ಫ್ಲೈಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುವುದಿಲ್ಲ.
ವಿಸ್ತಾರಾ ಫ್ಲೈಟ್‌ಗಳ ಬುಕಿಂಗ್ ಅನ್ನು ಏರ್ ಇಂಡಿಯಾದ ವೆಬ್‌ಸೈಟ್‌ಗೆ ಮರುನಿರ್ದೇಶಿಸಲಾಗುತ್ತದೆ. ನ.11ರವರೆಗೆ ಮಾತ್ರ ವಿಸ್ತಾರ ಸಾಮಾನ್ಯ ವಿಮಾನಗಳು ಕಾರ್ಯಾನಿರ್ವಹಿಸಲಿವೆ.
ಈ ವಿಲೀನದ ಕುರಿತು ಮಾತನಾಡಿದ ವಿಸ್ತಾರಾ ಸಿಇಒ ವಿನೋದ್ ಕಣ್ಣನ್ ಅವರು, ಈ ಸಮಯದಲ್ಲಿ ಗ್ರಾಹಕರಿಗೆ ಸುಗಮ ಸಂವಹನ ಮತ್ತು ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಎರಡೂ ಏರ್‌ಲೈನ್‌ಗಳು ಬದ್ಧವಾಗಿರುತ್ತವೆ. ನಮ್ಮ ಗ್ರಾಹಕರಿಗೆ ಸೇವೆಯಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂದು ತಿಳಿಯಲು ನಮ್ಮ ತಂಡಗಳು ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.
ಮೊದಲ ಬಾರಿಗೆ ನವೆಂಬರ್ 2022ರಲ್ಲಿ ಘೋಷಿಸಲಾದ ವಿಲೀನವು ಏರ್ ಇಂಡಿಯಾವನ್ನು ವಿಶ್ವದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ ಒಂದನ್ನಾಗಿಸಲಿದೆ. ಹೆಚ್ಚು ವ್ಯಾಪಕವಾದ ನೆಟ್‌ವರ್ಕ್ ಮತ್ತು ವರ್ಧಿತ ಸೇವಾ ಕೊಡುಗೆಗಳನ್ನು ನೀಡುವ ಕಾರ್ಯತಂತ್ರದ ಕಾರಣದಿಂದಾಗಿ ಈ ವಿಲೀನ ಮಾಡಲಾಗಿದೆ.
ಪ್ರಸ್ತುತ ಟಾಟಾ ಗ್ರೂಪ್‌ನ ವಿಸ್ತಾರ ಮತ್ತು ಸಿಂಗಾಪುರ್ ಏರ್‌ಲೈನ್ಸ್ ನಡುವಿನ 51:49 ಜಂಟಿ ಉದ್ಯಮವಾಗಿದೆ. ಭಾರತ ಸರ್ಕಾರದ ಅನುಮತಿಯೊಂದಿಗೆ ಸಿಂಗಾಪುರ್ ಏರ್‌ಲೈನ್ಸ್ ಹೊಸದಾಗಿ ವಿಸ್ತರಿಸಿದ ಏರ್ ಇಂಡಿಯಾದಲ್ಲಿ ಶೇ.25.1 ಪಾಲನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಏರ್ ಇಂಡಿಯಾ ಜೊತೆ ಸಿಂಗಾಪೂರ್ ಏರ್‌ಲೈನ್ಸ್ ಹೂಡಿಕೆ ಮಾಡುವುದರಿಂದ ಏರ್ ಇಂಡಿಯಾವನ್ನು ದೇಶಿಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿಮಾನಯಾನ ಕಂಪನಿಯನ್ನಾಗಿ ಬೆಳೆಸಲಿದೆ.