ಮಲ್ಲೇಶ್ವರದ ಮಂತ್ರಿ ಮಾಲ್‌ ನ ಬೀಗ ತೆಗೆಯಲು ಹೈಕೋರ್ಟ್‌ಗೆ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

41 ಕೋಟಿ ರೂ. ಆಸ್ತಿ ತೆರಿಗೆ ಪೈಕಿ 20 ಕೋಟಿ ರೂ. ಮೊತ್ತವನ್ನು ಜು.31ರೊಳಗೆ ಪಾವತಿಸುವುದಾಗಿ ಮುಚ್ಚಳಿಕೆ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಮಲ್ಲೇಶ್ವರದ ಮಂತ್ರಿ ಮಾಲ್‌ಗೆ ಹಾಕಲಾಗಿರುವ ಬೀಗ ತೆಗೆಯುವಂತೆ ಬಿಬಿಎಂಪಿಗೆ ಹೈಕೋರ್ಟ್‌ಗೆ ಸೂಚಿಸಿದೆ.

ಮಾಲ್‌ಗೆ ಬೀಗ ಹಾಕಿರುವ ಬಿಬಿಎಂಪಿಯ ಕ್ರಮ ಪ್ರಶ್ನಿಸಿ ಮಾಲ್ ಮಾಲೀಕರಾಗಿರುವ ಮೆ. ಅಭಿಷೇಕ್ ಪ್ರಾಪ್‌ಬಿಲ್ಡ್ ಪ್ರೈ. ಲಿ. ಸಲ್ಲಿಸಿದ್ದ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ರಜಾಕಾಲದ ನ್ಯಾಯಪೀಠ ವಿಚಾರಣೆ ನಡೆಸಿತು.

ಅರ್ಜಿದಾರ ಕಂಪನಿ ಪರ ವಕೀಲ ಪ್ರಭುಲಿಂಗ ನಾವದಗಿ ಹಾಜರಾಗಿ, ಮಾಲ್‌ನಲ್ಲಿ 250ಕ್ಕೂ ಅಧಿಕ ಮಳಿಗೆ ಹಾಗೂ ವ್ಯಾಪಾರ ಕೇಂದ್ರಗಳಿವೆ. ಸುಮಾರು 2,500 ಉದ್ಯೋಗಿಗಳಿದ್ದಾರೆ. ಮೇ 10ರಿಂದ ಕಾನೂನು ಬಾಹಿರವಾಗಿ ಮಾಲ್‌ಗೆ ಬಿಬಿಎಂಪಿ ಬೀಗ ಹಾಕಿದೆ. ಇದರಿಂದ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತಿದ್ದು, ನಿತ್ಯ ಅಂದಾಜು 7ರಿಂದ 8 ಕೋಟಿ ರೂ. ವ್ಯಾಪಾರ ನಷ್ಟವಾಗುತ್ತಿದೆ ಎಂದು ತಿಳಿಸಿದರು.

ಬಿಬಿಎಂಪಿ ಐದನೇ ಬಾರಿಗೆ ಮಾಲ್ ಅನ್ನು ಮುಚ್ಚಿಸಿದೆ. ಈ ನಡೆ ಮಳಿಗೆಗಳ ಬಾಡಿಗೆದಾರರು ಅರ್ಜಿದಾರರ ವಿರುದ್ಧ ಮೊಕದ್ದಮೆ ಹೂಡಲು ಮತ್ತು ಬಾಡಿಗೆ ಪಾವತಿಸಲು ನಿರಾಕರಿಸುವುದನ್ನು ಪ್ರೇರೇಪಿಸುತ್ತದೆ. ಅಕ್ಷಯ ತೃತೀಯ ದಿನದಿಂದ ಮಾಲ್ ಒಳಗಿರುವ ಚಿನ್ನಾಭರಣ ಮಳಿಗೆಗಳ ವ್ಯಾಪಾರಕ್ಕೆ ಅಡಚಣೆ ಉಂಟಾಗಿ, ದೊಡ್ಡ ಮೊತ್ತದ ನಷ್ಟ ಉಂಟಾಗಿದೆ ಎಂದು ದೂರಿದರು.

ಅರ್ಜಿದಾರ ಕಂಪನಿ ಹಣಕಾಸು ಅಧಿಕಾರಿ ಪ್ರಮಾಣಪತ್ರ ಸಲ್ಲಿಸಿ ಜು.31ರೊಳಗೆ 20 ಕೋಟಿ ರೂ. ಅನ್ನು ಬಿಬಿಎಂಪಿಗೆ ಪಾವತಿಸಲಾಗುವುದು ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.

ಬಿಬಿಎಂಪಿ ಪರ ವಕೀಲರು, 2018ರಿಂದ ಮಾಲ್‌ಗೆ ಸಂಬಂಧಿಸಿದಂತೆ ಅರ್ಜಿದಾರರು ಒಟ್ಟು 41 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ಪೀಠದ ಗಮನಕ್ಕೆ ತಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರ ಕಂಪನಿಯು ಜೂ.1ರೊಳಗೆ 3.5 ಕೋಟಿ ರೂ. ಆಸ್ತಿ ತೆರಿಗೆಯನ್ನು ಬಿಬಿಎಂಪಿಗೆ ಪಾವತಿಸಬೇಕು. ಮಾಲ್‌ಗೆ ಹಾಕಿರುವ ಬೀಗವನ್ನು ಬಿಬಿಎಂಪಿ ತೆಗೆಯಬೇಕು ಎಂದು ಸೂಚಿಸಿ ಷರತ್ತುಬದ್ಧ ಮಧ್ಯಂತರ ಆದೇಶ ಮಾಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!