ಹೊಸದಿಗಂತ ವರದಿ ಹುಬ್ಬಳ್ಳಿ :
ಕ್ಷೇತ್ರಗಳಿಗೆ ಅನುದಾನ ಕೊರತೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ಯಾರಂಟಿಗಳನ್ನು ನಿಲ್ಲಿಸುವಂತೆ ಬಹಿರಂಗ ಹೇಳಿಕೆ ನೀಡಿದ್ದ ಶಾಸಕ ಗವಿಯಪ್ಪ ವಿರುದ್ದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ.
ಶಾಸಕ ಗವಿಯಪ್ಪ ಅವರು ಅನುದಾನದ ಕೊರತೆ ಹಿನ್ನೆಲೆಯಲ್ಲಿ ಎರಡು ಗ್ಯಾರೆಂಟಿ ಗಳನ್ನ ಕೈ ಬಿಡುವಂತೆ ಒತ್ತಾಯ ಮಾಡುವುದಾಗಿ ಹೇಳಿಕೆ ನೀಡಿದ್ದರು. ಸ್ವಪಕ್ಷೀಯ ಶಾಸಕನ ಈ ಹೇಳಿಕೆ ಸರ್ಕಾರಕ್ಕೆ ಸಾಕಷ್ಟು ಮಜುಗುರ ತಂದಿತ್ತು.
ಇದಕ್ಕೆ ಈಗ ಡಿಸಿಎಂ ಡಿಕೆಶಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿ, ಶಾಸಕ ಗವಿಯಪ್ಪ ಅವರಿಗೆ ಪಕ್ಷದಿಂದ ನೋಟಿಸ್ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಗ್ಯಾರೆಂಟಿಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ.ಈ ರೀತಿಯ ಗೊಂದಲ ಹೇಳಿಕೆ ಸರಿಯಲ್ಲ ಎಂದಿದ್ದಾರೆ.
ರಾಜ್ಯದ ಜನರಿಗೆ ಭರವಸೆ ನೀಡಿದಂತೆ ನಡೆದುಕೊಳ್ಳುತ್ತೇವೆ. ಬಡವರ ಪರ ಸರ್ಕಾರ ಇದೆ. ಶೋಷಿತರ ಧ್ವನಿಯಾಗಿ ನಿಲ್ಲುತ್ತೇವೆ. ಗ್ಯಾರೆಂಟಿ ಗಳನ್ನ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ನೀಡುತ್ತೇವೆ ಎಂದಿದ್ದಾರೆ. ಒಂದೆಡೆ ಗ್ಯಾರಂಟಿಗಳಿಂದ ಅನುದಾನದ ಕೊರತೆ ಆಗುತ್ತಿದೆ ಎಂಬ ಬೇಗುದಿ ಕಾಂಗ್ರೆಸ್ ಶಾಸಕರಲ್ಲಿ ಹೆಚ್ಚಿದ್ದು, ಗವಿಯಪ್ಪ ಇದಕ್ಕೆ ದನಿಯಾಗಿದ್ದರೆ, ಪಕ್ಷದ ನಾಯಕರು ಈ ಅಸಮಾಧಾನ ದಮನಿಸಲು ಹೊರಟಿದ್ದು ಕಂಡು ಬರುತ್ತಿದೆ.