ಹೊಸದಿಗಂತ ವರದಿ ವಿಜಯಪುರ:
ಭೀಮಾತೀರದ ಕುಖ್ಯಾತ ನಟೋರಿಯಸ್ ಹಂತಕ ಬಾಗಪ್ಪ ಹರಿಜನ ಬರ್ಬರ ಹತ್ಯೆ ಪ್ರಕರಣದ 4 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಪ್ರಕಾಶ ಉರ್ಫ್ ಪಿಂಟು ಲಕ್ಷ್ಮಣ ಮೇಲಿನಕೇರಿ (26), ಹೊರ್ತಿ ಗ್ರಾಮದ ರಾಹುಲ್ ಭೀಮಾಶಂಕರ ತಳಕೇರಿ (20), ಅಗರಖೇಡದ ಸುದೀಪ ರೇಣಾಕಾ ಕಾಂಬಳೆ (20), ಬೈಲಹೊಂಗಲದ ಮಣಿಕಂಠ ಉರ್ಫ್ ಗದಿಗೆಪ್ಪ ಶಂಕ್ರಪ್ಪ ಬೆನಕೊಪ್ಪ (27) ಬಂಧಿತ ಆರೋಪಿಗಳು.
ಪಿಂಟು ಹಾಗೂ ಇತರೆ ನಾಲ್ಕೈದು ಜನ ಆರೋಪಿಗಳು ಇಲ್ಲಿನ ರೇಡಿಯೋ ಕೇಂದ್ರ ಬಳಿಯ ಮದೀನಾ ನಗರದಲ್ಲಿನ ಬಾಗಪ್ಪ ಹರಿಜನ ಮನೆ ಎದುರು ಫೆ. 11, 2025 ರಂದು ರಾತ್ರಿ 9.30 ಕ್ಕೆ ಬಾಗಪ್ಪ ಹರಿಜನ ಈತನಿಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಕೊಡಲಿ ಹಾಗೂ ಮಚ್ಚಿನಿಂದ ಕುತ್ತಿಗೆಗೆ, ಎದೆಗೆ ಮತ್ತು ಕೈಗಳಿಗೆ ಬರ್ಬರವಾಗಿ ಹಲ್ಲೆ ಮಾಡಿದ್ದು, ಬಾಗಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದ.
ಇತ್ತೀಚೆಗೆ ನಗರದಲ್ಲಿ ರವಿ ಮೇಲಿನಕೇರಿ ಎಂಬುವರಿಗೆ ತುಳಸಿರಾಮ ಹರಿಜನ ಹಾಗೂ ಆತನ ಸಹಚರರಾದ ಅಲೇಕ್ಸ್ ಗೊಲ್ಲರ, ಶಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರುಗೇಶ ಉಳ್ಳಾಗಡ್ಡಿ, ರಾಜೇಸಾಬ ರುದ್ರವಾಡಿ ಸೇರಿಕೊಂಡು ಕೊಲೆ ಮಾಡಿದ್ದು, ಈ ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಬಾಗಪ್ಪ ಹರಿಜನ ಹಾಗೂ ರವಿ ಮೇಲಿನಕೇರಿ ಸಂಬಂಧಿಕರಾಗಿದ್ದು, ಇವರಿಬ್ಬರ ಮಧ್ಯೆ ಕೆಲವು ವರ್ಷಗಳಿಂದ ಹಣಕಾಸಿನ ವ್ಯವಹಾರವಿದ್ದು, ಇಬ್ಬರೂ ಸೇರಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು.
ರವಿ ಮೇಲಿನಕೇರಿ ಮೃತಪಟ್ಟ ನಂತರ ಬಾಗಪ್ಪ ಹರಿಜನ ಈತ, ರವಿ ಮೇಲಿನಕೇರಿ ತಮ್ಮನಾದ ಪ್ರಕಾಶ ಮೇಲಿನಕೇರಿಗೆ, ನಿಮ್ಮ ಅಣ್ಣ ನನ್ನ ಹೆಸರು ಹೇಳಿ ಹಣ, ಆಸ್ತಿ ಮತ್ತು ವಾಹನ ಎಲ್ಲವನ್ನು ಮಾಡಿಕೊಂಡಿದ್ದಾನೆ. ಅವೆಲ್ಲ ನನಗೆ ಬಿಟ್ಟು ಕೊಡಬೇಕು ಅಂತಾ ಒತ್ತಡ ಹಾಕುತ್ತಿದ್ದ, ಹಲವು ಬಾರಿ ಬೆದರಿಕೆ ಸಹ ಹಾಕಿದ್ದ. ಇತ್ತೀಚೆಗೆ ಬಾಗಪ್ಪ ಈತನು ಪ್ರಕಾಶ ಮೇಲಿನಕೇರಿಗೆ ನೀವು ಆಸ್ತಿ ಬಿಟ್ಟುಕೊಡಬೇಕು. ಇಲ್ಲದಿದ್ದರೆ 10 ಕೋಟಿ ಹಣ ಕೊಡಬೇಕು. ಅದೂ ಆಗದಿದ್ದರೆ ನಿಮ್ಮ ಅಣ್ಣನ ಹೆಂಡತಿಯನ್ನು ನನ್ನ ಹತ್ತಿರ ಕಳುಹಿಸು ಎಂದು ಅಣ್ಣನ ಹೆಂಡತಿಯ ಕುರಿತಾಗಿ ಅವಾಚ್ಯ ಪದ ಬಳಕೆ ಮಾಡಿ ಮಾತನಾಡಿದ್ದ. ನಿಮ್ಮ ಅಣ್ಣನಿಗೆ ಹೇಗೆ ಹೊಡೆದಿರುತ್ತೇನೆ. ಅದೇ ತರಹ ನಿನಗೂ ಹೊಡೆಯುತ್ತೇನೆ ಅಂತಾ ಧಮಕಿ ಹಾಕಿದ್ದಕ್ಕೆ, ಪ್ರಕಾಶ ಮೇಲಿನಕೇರಿ ಈತನಿಗೆ ತನ್ನ ಅಣ್ಣನ ಕೊಲೆ ಬಾಗಪ್ಪ ಹರಿಜನ ಕುಮ್ಮಕ್ಕಿನಿಂದ ನಡೆದಿದೆ ಅಂತಾ ಖಚಿತವಾಗಿದೆ.
ಈ ಹಿನ್ನೆಲೆಯಲ್ಲಿ ಬಾಗಪ್ಪ ಹರಿಜನ ಈತನಿಗೆ ಮುಗಿಸಿ ಬಿಡಬೇಕು ಅಂತಾ ಪ್ರಕಾಶ ಮೇಲಿನಕೇರಿ ತನ್ನ ಸಂಬಂಧಿಕ ಹಾಗೂ ಸ್ನೇಹಿತರೊಂದಿಗೆ ಸಂಚು ಮಾಡಿ ಬಾಗಪ್ಪ ಹರಿಜನ ತನ್ನ ಮನೆಯ ಹೊರಗಡೆ ವಾಕಿಂಗ್ ಮಾಡುತ್ತಿದ್ದಾಗ. ಆಟೋ ಹಾಗೂ ಬೈಕ್‌ನಲ್ಲಿ ಬಂದು, ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಕೊಡಲಿ, ಮಚ್ಚು ಹಾಗೂ ಜಂಬೆಯಿಂದ ಹೊಡೆದು ಕೊಲೆ ಮಾಡಿದ್ದಾರೆ.
ಈ ಬಗ್ಗೆ ಮೃತನ ಮಗಳಾದ ಗಂಗೂಬಾಯಿ ಬಾಗಪ್ಪ ಹರಿಜನ ಗಾಂಧಿ ಚೌಕ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ, ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಆಯುಧ ಹಾಗೂ ವಾಹನಗಳನ್ನು ಜಪ್ತಿ ಮಾಡುವುದು ಹಾಗೂ ಇನ್ನಿತರ ತನಿಖಾ ಕಾರ್ಯ ಮುಂದುವರೆದಿದೆ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ ಘಟನೆ ಕುರಿತಾದ ವಿವರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಈ ಸಂದರ್ಭ ಪೊಲೀಸ್ ಅಧಿಕಾರಿಗಳು ಇದ್ದರು.