ದಿಗಂತ ವರದಿ ವಿಜಯಪುರ:
ಭೀಮಾತೀರದ ಕುಖ್ಯಾತಿ ಹಂತಕ ಬಾಗಪ್ಪ ಹರಿಜನ ಕೊಲೆ ಪ್ರಕರಣ ಹಳೇ ವೈಷಮ್ಯಕ್ಕೆ ನಡೆದಿದೆ ಎಂದು ಆರೋಪಿಸಿ, ಈ ಸಂಬಂಧ ಬಾಗಪ್ಪನ ಪುತ್ರಿ ಗಂಗೂಬಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಕೆಲ ತಿಂಗಳ ಹಿಂದೆ ನಗರದಲ್ಲಿ ವಕೀಲ ರವಿ ಅಗರಖೇಡ ಎಂಬುವರ ಭೀಕರ ಹತ್ಯೆ ನಡೆದಿತ್ತು. ಇಲ್ಲಿನ ಆರ್ ಟಿಒ ಕಚೇರಿ, ಮುರಾಣಕೇರಿ ಬಡಾವಣೆ ಬಳಿ ವಕೀಲ ರವಿಯನ್ನು ಕಾರು ಡಿಕ್ಕಿಪಡಿಸಿ, ಸುಮಾರು ಎರಡು ಕಿಲೋಮೀಟರ್ ವರೆಗೆ, ದೇಹವನ್ನು ಎಳೆದೊಯ್ದು ಭೀಕರವಾಗಿ ಕೊಲೆ ಮಾಡಲಾಗಿತ್ತು.
ಈ ವಕೀಲನ ಕೊಲೆಯನ್ನು ಭಾಗಪ್ಪನ ಸಹಚರರು ಮಾಡಿದ್ದಾರೆಂದು ಶಂಕಿಸಲಾಗಿತ್ತು. ಅದೇ ಸಿಟ್ಟಿನಿಂದ ನನ್ನ ತಂದೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂದು ಪಿಂಟ್ಯಾ ವಿರುದ್ಧ ಬಾಗಪ್ಪನ ಪುತ್ರಿ ಗಂಗೂಬಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪಿಂಟ್ಯಾ ಹಾಗೂ ಆತನ ಸಹಚರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಬಾಗಪ್ಪ ಹರಿಜನ ಶವ ಆಸ್ಪತ್ರೆಯಲ್ಲಿದೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗುತ್ತದೆ.
ಬಾಗಪ್ಪ ಹರಿಜನ ಹತ್ಯೆ ಹಿನ್ನೆಲೆಯಲ್ಲಿ ಪೊಲೀಸರು ಜಿಲ್ಲೆಯಲ್ಲಿ ಹೆಚ್ಚಿನ ನಿಗಾವಹಿಸಿದ್ದು,
ಇನ್ನು ಸಾರ್ವಜನಿಕರು ತೀವ್ರ ಭೀತಿಗೊಂಡಿದ್ದಾರೆ. ಈ ಸಂಬಂಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.