ಹೊಸದಿಗಂತ, ಉಳ್ಳಾಲ(ಮಂಗಳೂರು):
ಟಾರ್ಗೆಟ್ ಇಲ್ಯಾಸ್ ಕೊಲೆ ಆರೋಪಿ, ಉಳ್ಳಾಲದ ನಟೋರಿಯಸ್ ರೌಡಿ ಸಮೀರ್ ಅಲಿಯಾಸ್ ಕಡಪ್ಪರ ಸಮೀರ್ ಅಲಿ (34)ಯನ್ನು ತೊಕ್ಕೊಟ್ಟು ಸಮೀಪದ ಕಲ್ಲಾಪುವಿನ ವಿಕೆ ಫರ್ನಿಚರ್ ಬಳಿ ತಂಡವೊಂದು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದೆ.
ಸಮೀರ್ ಭಾನುವಾರ ರಾತ್ರಿ ತಾಯಿ,ಪತ್ನಿ,ಇಬ್ಬರು ಪುಟ್ಟ ಮಕ್ಕಳೊಂದಿಗೆ ಕಾರಿನಲ್ಲಿ ಕಲ್ಲಾಪಿನ ಫಾಸ್ಟ್ ಫುಡ್ ವೊಂದಕ್ಕೆ ಉಪಹಾರಕ್ಕೆ ತೆರಳಿದ್ದ ವೇಳೆ ದಾಳಿ ನಡೆದಿದೆ.
ಸಮೀರ್ ಕಾರು ಇಳಿಯುತ್ತಿದ್ದ ವೇಳೆ ಮತ್ತೊಂದು ಕಾರು ಬೆನ್ನಟ್ಟಿ ಬಂದಿದ್ದ ಮೂವರ ತಂಡವು ಮಾರಕಾಸ್ತ್ರಗಳಿಂದ ಸಮೀರ್ ನನ್ನ ಬೆನ್ನಟ್ಟಿದ್ದು, ಈ ವೇಳೆ ಸಮೀರ್ ತಪ್ಪಿಸಿಕೊಂಡು ರೈಲ್ವೇ ಹಳಿ ಕಡೆಗೆ ಓಡಿರುವುದಾಗಿ ತಾಯಿ ಹೇಳಿಕೆ ನೀಡಿದ್ದರು. ಘಟನೆ ನಡೆಯುತ್ತಿದ್ದಂತೆ ಕಲ್ಲಾಪು ಜಂಕ್ಷನ್ ನಲ್ಲಿ ಜನಸ್ತೋಮವೇ ನೆರೆದಿದ್ದು ತಪ್ಪಿಸಿ ಕೊಂಡಿರುವ ರೌಡಿಶೀಟರ್ ಸಮೀರ್ ಗಾಗಿ ಹುಡುಕಾಟ ನಡೆಸಿದ್ದರು.
ತಡರಾತ್ರಿ ಸಮೀರ್ ಮೃತ ದೇಹವು ವಿಕೆ ಫರ್ನಿಚರ್ ಮಳಿಗೆಯ ಬಳಿಯ ಪೊದೆಯಲ್ಲಿ ಸಿಕ್ಕಿದೆ.ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಕೊಲೆ ನಡೆಸಿದ ದುಷ್ಕರ್ಮಿಗಳು ತಾವು ಬಂದಿದ್ದ ಉಡುಪಿ ನೋಂದಣಿಯ ಸ್ವಿಪ್ಟ್ ಕಾರಲ್ಲಿ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜೈಲಿಂದ ಹೊರಬರುತ್ತಲೇ ಕೊಲೆ
ಸಮೀರ್ ಮತ್ತು ಸಹಚರರು ಇತ್ತೀಚಿಗಷ್ಟೆ ದರೋಡೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದು ದಿನಗಳ ಹಿಂದಷ್ಟೆ ಸಮೀರ್ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನಂತೆ. ಸಮೀರ್ ನನ್ನು ಜೈಲಿನಲ್ಲಿ ಕಳೆದ ತಿಂಗಳು ತಂಡವೊಂದು ಕೊಲೆಗೆ ಯತ್ನಿಸಿದ್ದು ಅಲ್ಲಿ ಸಮೀರ್ ಬಚಾವಾಗಿದ್ದ. ಇದೀಗ ಮತ್ತೆ ಸಮೀರ್ ಗೆ ದುಷ್ಕರ್ಮಿಗಳು ಮುಹೂರ್ತ ಇಟ್ಟು ಕೊಲೆ ನಡೆಸಿದ್ದಾರೆ.