ಹೊಸ ದಿಗಂತ ವರದಿ, ಮೈಸೂರು:
ಸದ್ಯ ನನಗೆ ರಾಜಕೀಯದ 2020 ಮ್ಯಾಚ್ ಆಡುವ ಜವಾಬ್ದಾರಿಯನ್ನ ಪಕ್ಷ ವಹಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುತ್ತಿದ್ದೇನೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಆಯ್ಕೆ ಬೆನ್ನಲ್ಲೇ ಶಾಸಕ ಯತ್ನಾಳ್ ಅಸಮಾಧಾನಗೊಂಡಿರುವುದಕ್ಕೆ ಪ್ರತಿಕ್ರಿಯಿಸಿ, ಯತ್ನಾಳ್‌ರ ಹೇಳಿಕೆಯನ್ನು ತಪ್ಪಾಗಿ ಅರ್ಥೆಸಲಾಗಿದೆ. ಅಭಿಪ್ರಾಯ ಹೇಳಲು ಸ್ವತಂತ್ರರಿದ್ದಾರೆ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಅವರವರ ಅಭಿಪ್ರಾಯಗಳು ಇರುತ್ತೆ. ಎಲ್ಲರ ಅಭಿಪ್ರಾಯದ ಮೇರೆಗೆ ಕೇಂದ್ರದ ವರಿಷ್ಠರು ತೀರ್ಮಾನ ಮಾಡಿದ್ದಾರೆ. ಯತ್ನಾಳ್ ಜೀ ಕೆಲವು ವೇಳೆ ನೋವಿನಿಂದ ಮಾತನಾಡಿರಬಹುದು. ಕೆಲವು ಸಮಸ್ಯೆಗಳನ್ನು ಹೇಳಿಕೊಂಡಿರಬಹುದು. ಎಲ್ಲವನ್ನು ಹಿರಿಯರು ಕುಳಿತು ಸಮಾಲೋಚನೆ ಮಾಡಿ ಉತ್ತರ ಕಂಡುಕೊಳ್ಳುತ್ತೇವೆ ಎಂದರು.
ವಿಪಕ್ಷ ನಾಯಕ ಸ್ಥಾನಕ್ಕೆ ಆರ್. ಅಶೋಕ ಅಸಮರ್ಥ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರ ಸಾಮರ್ಥ್ಯ ಏನೆಂಬುದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರು ತೀರ್ಮಾನ ಮಾಡ್ತಾರೆ. ಅದನ್ನ ಆಡಳಿತ ಪಕ್ಷದವರು, ಬೇರೆ ಯಾರೂ ತೀರ್ಮಾನ ಮಾಡಲ್ಲ ಎಂದು ವಿಪಕ್ಷ ನಾಯಕರ ಹೇಳಿಕೆಗಳಿಗೆ ಟಾಂಗ್ ನೀಡಿದರು.
ಭಾರತ ತಂಡ ಇಂದು ಗೆದ್ದೇ ಗೆಲ್ಲುತ್ತೆ.ವಿರಾಟ್ ಕೊಹ್ಲಿ ನನ್ನ ಫೇವರೆಟ್ ಪ್ಲೇಯರ್. ಭಾರತ ತಂಡ ಆಲ್ ರೌಂಡ್ ಪ್ರದರ್ಶನ ತೋರಿಸುತ್ತಿದೆ. ನಮ್ಮ ಟೀಂ ಬಹಳ ಚೆನ್ನಾಗಿದೆ. ನಾವು ಇಂದು ಕಪ್ ಗೆಲ್ಲುತ್ತೇವೆ ಎಂದು ಟೀಂ ಇಂಡಿಯಾಗೆ ಆಲ್ ದಿ ಬೆಸ್ಟ್ ಹೇಳಿದರು.
ಅದ್ಧೂರಿ ಸ್ವಾಗತ; ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಬಿ.ವೈ.ವಿಜಯೇಂದ್ರರಿಗೆ ಅವರ ಅಭಿಮಾನಿಗಳು, ಬೆಂಬಲಿಗರು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದರು.
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಏಟ್ರಿಯಾ ಹೋಟೆಲ್ ಬಳಿಗೆ ಆಗಮಿಸಿದ ಬಿ.ವೈ.ವಿಜಯೇಂದ್ರರಿಗೆ ಅಭಿಮಾನಿಗಳು ಕ್ರೇನ್ ಮೂಲಕ ಹೂವಿನ ಮಳೆಗೆರೆದರು. ಅಲ್ಲದೇ ಬೃಹತ್ ಸೇಬಿನ ಹಾರವನ್ನು ಕ್ರೇನ್ ಮೂಲಕ ಹಾಕಿದರು. ಅಲ್ಲದೇ ಸನ್ಮಾನಿಸಿ, ಬೆಳ್ಳಿ ಗದೆ ನೀಡಿ, ಪಟಾಕಿ ಸಿಡಿಸಿ, ವಿವಿಧ ಘೋಷಣೆಗಳನ್ನು ಕೂಗಿದರು. ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ಹೊರಟ ಬಿ.ವೈ.ವಿಜಯೇಂದರಿಗೆ ಶಾಸಕ ಟಿ.ಎಸ್.ಶ್ರೀವತ್ಸ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮಾಜಿ ಶಾಸಕ ಎನ್.ಮಹೇಶ್, ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಶಾಸಕರು ಸಾಥ್ ನೀಡಿದರು.
ಗಣಪತಿ ಸಚ್ಚಿದಾನಂದ ಶ್ರೀಗಳ ಭೇಟಿ: ಬಳಿಕ ಬಿ.ವೈ.ವಿಜಯೇಂದ್ರ ಮೈಸೂರಿನ ಊಟಿ ರಸ್ತೆಯಲ್ಲಿರುವ ಅವಧೂತ ಆಶ್ರಮಕ್ಕೆ ಆಗಮಿಸಿ, ಶ್ರೀಗಣಪತಿ ಸಚ್ಚಿದಾನಂದಸ್ವಾಮಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡು, ಬಳಿಕ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ, ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮಿಯವರ ಆಶೀರ್ವಾದ ಪಡೆದುಕೊಂಡರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮಾಜಿ ಶಾಸಕರಾದ ನಿರಂಜನ್‌ಕುಮಾರ್, ಬಾಲರಾಜು, ಮೈಸೂರು ಮಹಾನಗರಪಾಲಿಕೆಯ ಮೇಯರ್ ಶಿವಕುಮಾರ್, ಚಿತ್ರ ನಟ ಹಾಗೂ ಮುಖಂಡ ಎಸ್.ಜಯಪ್ರಕಾಶ್ (ಜೆಪಿ), ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಬಿಜೆಪಿ ಸಹ ವಕ್ತಾರ ಕೇಬಲ್ ಮಹೇಶ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷೆ ಮಂಗಳ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.