ಹೊಸದಿಗಂತ ಡಿಜಿಟಲ್ ಡೆಸ್ಕ್:
NEET-UG 2026 ಮರುಪರೀಕ್ಷೆಗೆ ಸಂಬಂಧಿಸಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮಹತ್ವದ ಕ್ರಮ ಕೈಗೊಂಡಿದ್ದು ಈ ಬಾರಿ ಪರೀಕ್ಷೆಯ ಪಾರದರ್ಶಕತೆ ಮತ್ತು ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಅಭ್ಯರ್ಥಿಗಳೊಂದಿಗೆ ನೇರ ಸಂಪರ್ಕ ಸಾಧಿಸುವ WhatsApp ವ್ಯವಸ್ಥೆಯನ್ನು ಆರಂಭಿಸಿದೆ.
ಇದೇ ಮೊದಲ ಬಾರಿಗೆ WhatsApp ಚಾನೆಲ್ ಮೂಲಕ ಅಧಿಕೃತ ಮಾಹಿತಿ ಕಳುಹಿಸುವ ವ್ಯವಸ್ಥೆ ಜಾರಿಯಾಗಿದೆ. ಪರೀಕ್ಷಾ ದಿನಾಂಕ, ಪ್ರವೇಶ ಪತ್ರ, ಪರೀಕ್ಷಾ ಕೇಂದ್ರ, ಭದ್ರತಾ ಸೂಚನೆಗಳು ಹಾಗೂ ವಂಚನೆಗಳ ಬಗ್ಗೆ ಎಚ್ಚರಿಕೆ ಸಂದೇಶಗಳು ಇನ್ನು ನೇರವಾಗಿ ವಿದ್ಯಾರ್ಥಿಗಳ ಮೊಬೈಲ್‌ಗೆ ತಲುಪಲಿವೆ.
ಪರೀಕ್ಷೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಕಲಿ ವೆಬ್‌ಸೈಟ್‌ಗಳು, ಪ್ರಶ್ನೆಪತ್ರಿಕೆ ಸೋರಿಕೆ ಎಂಬ ಹೆಸರಿನಲ್ಲಿ ಹಣ ವಸೂಲಿ ಮಾಡುವ ಜಾಲಗಳು ಹಾಗೂ ಸುಳ್ಳು ಸಂದೇಶಗಳ ಬಗ್ಗೆ ಸಂಸ್ಥೆ ಎಚ್ಚರಿಕೆ ನೀಡಿದೆ. ಪ್ರಶ್ನೆಪತ್ರಿಕೆ, ಉತ್ತರ ಕೀ ಅಥವಾ ಪರೀಕ್ಷೆಯಲ್ಲಿ ನೆರವು ನೀಡುವುದಾಗಿ ಹೇಳಿದರೆ ನಂಬಬೇಡಿ. ಅಂತಹವರ ವಿರುದ್ಧ ತಕ್ಷಣ ದೂರು ನೀಡಿ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲ ಸಂದೇಶಗಳಿಂದ ಗೊಂದಲ ಉಂಟಾಗಿದ್ದು, ಇದಕ್ಕೂ NTA ಸ್ಪಷ್ಟನೆ ನೀಡಿದೆ. ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಕೇವಲ ಅಧಿಕೃತ ವೆಬ್‌ಸೈಟ್‌ನಿಂದಲೇ ಡೌನ್‌ಲೋಡ್ ಮಾಡಬೇಕು. WhatsApp ಮೂಲಕ Admit Card ನೀಡಲಾಗುವುದಿಲ್ಲ. WhatsApp ಸೇವೆಯನ್ನು ಮಾಹಿತಿ ಮತ್ತು ಎಚ್ಚರಿಕೆ ಸಂದೇಶಗಳಿಗಾಗಿ ಮಾತ್ರ ಬಳಸಲಾಗುತ್ತಿದೆ ಎಂದು ಹೇಳಿದೆ.
ಕಳೆದ ಕೆಲವು ವರ್ಷಗಳಲ್ಲಿ NEET ಪರೀಕ್ಷೆ ಸುತ್ತ ಹಲವು ವಿವಾದಗಳು ಸೃಷ್ಟಿಯಾಗಿದ್ದವು. ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದವು. ಇದೇ ಹಿನ್ನೆಲೆಯಲ್ಲಿ ಈ ಬಾರಿ ಯಾವುದೇ ಅನುಮಾನಕ್ಕೆ ಅವಕಾಶ ಕೊಡದಂತೆ ಹಲವು ಹಂತದ ಭದ್ರತಾ ಕ್ರಮಗಳನ್ನು ಜಾರಿಗೆ ತಂದಿವೆ.



