ಹೊಸದಿಗಂತ ಡಿಜಿಟಲ್ ಡೆಸ್ಕ್
ಗ್ರಾಮಸ್ಥರಿಗೆ ಸೇತುವೆ ನಿರ್ಮಿಸಿಕೊಡುವುದಾಗಿ ರಾಜಕಾರಣೆಗಳ ಪೊಳ್ಳು ಭರವಸೆಗಳನ್ನು ಕೇಳಿ ಬೇಸತ್ತ ಟ್ರಕ್ ಚಾಲಕನೊಬ್ಬ ತನ್ನ ಪತ್ನಿಯ ಆಭರಣಗಳನ್ನೇ ಒತ್ತೆ ಇಟ್ಟು ಗ್ರಾಮಕ್ಕೆ ಅಗತ್ಯವಿರುವ ಸೇತುವೆ ನಿರ್ಮಾಣಕ್ಕೆ ಮುಂದಾದ ಹೃದಯಸ್ಪರ್ಶಿ ಘಟನೆ ಒರಿಸ್ಸಾದಲ್ಲಿ ನಡೆದಿದೆ.
ಒರಿಸ್ಸಾದ ರಾಯಗಡ ಜಿಲ್ಲೆಯ ಕಾಶಿಪುರ ಬ್ಲಾಕ್‌ನ ಗುಂಜರಾಂಪಂಜರ ಗ್ರಾಮಸ್ಥರು ಕಳೆದ ಹಲವಾರು ವರ್ಷಗಳಿಂದ ಗ್ರಾಮಕ್ಕೆ ಸೇತುವೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರನ್ನು ಕೇಳಿಕೊಳ್ಳುತ್ತಲೇ ಬಂದಿದ್ದರು. ಇಲ್ಲಿನ ಜನರಿಗೆ ಸೇತುವೆಯದ್ದೇ ದೊಡ್ಡ ಸಮಸ್ಯೆಯಾಗಿತ್ತು. 100 ಕುಟುಂಬಗಳ ತನ್ನ ಪುಟ್ಟ ಗ್ರಾಮದ ಜನರು ಪಕ್ಕದ ಕಲಹಂಡಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ಹೋಗಬೇಕಾದರೆ ಇಲ್ಲಿ ಹರಿಯುವ ಅಪಾಯಕಾರಿ ಬಿಚ್ಲಾ ನದಿಯನ್ನು ದಾಟಿಯೇ ಹೋಗಬೇಕಿತ್ತು. ಈ ನದಿಯು ತುಂಬಾ ಆಳವಾಗಿಲ್ಲವಾದರೂ, ಅದರ ಹರಿವು ವೇಗವಾಗಿದೆ. ಆದ್ದರಿಂದ ಆಗಾಗ್ಗೆ, ಜನರು ಕೊಚ್ಚಿ ಹೋಗುವ ಘಟನೆಗಳು ನಡೆಯುತ್ತಲೇ ಇದ್ದವು. ವೇಗವಾಗಿ ಹರಿಯುವ ನದಿ ದಾಟುವಾಗ ಕೆಲವೊಮ್ಮೆ ಬೈಕ್ ಗಳು ಸಹ ಕೊಚ್ಚಿ ಹೋಗಿದ್ದವು. 26 ವರ್ಷದ ಟ್ರಕ್ ಚಾಲಕ ರಂಜಿತ್ ನಾಯಕ್ ಅವರು ಸಹ ಸ್ಥಳೀಯರೊಂದಿಗೆ ಸೇರಿ ಕಳೆದ ಎರಡು ಚುನಾವಣೆಗಳ ವೇಳೆ ನದಿಗೆ ಶಾಶ್ವತ ಸೇತುವೆ ನಿರ್ಮಿಸಿಕೊಡುವಂತೆ ರಾಜಕಾರಣಿಗಳ ಬಳಿ ಮನವಿ ಇಟ್ಟಿದ್ದರು.
ದಪ್ಪ ತೊಗಲಿನ ರಾಜಕಾರಣಿಗಳು ಯಾವಾಗ ತಮ್ಮ ಬೇಡಿಕೆಯನ್ನು ಪರಿಹರಿಸಲಾರರು ಎಂಬುದು ಮನವರಿಕೆಯಾಯಿತೋ ಆಗ ರಂಜಿತ್ ತಾವೇ ಸ್ವತಃ ಸೇತುವೆ ನಿರ್ಮಿಸುವ ಕಾರ್ಯಕ್ಕೆ ಕೈಹಾಕಿದರು. ತಮ್ಮಲ್ಲಿರುವ ಅಲ್ಪ ಹಣದಿಂದ ಕಾಂಕ್ರೀಟ್ ಸೇತುವೆಯನ್ನು ನಿರ್ಮಿಸಲು ಸಾಧ್ಯವಿಲ್ಲ ಎಂಬುದು ರಂಜಿತ್ ಅವರಿಗೆ ಗೊತ್ತಿತ್ತು. ಅದಕ್ಕಾಗಿ ಮರದ ಕಂಬಗಳು ಮತ್ತು ಬಿದಿರು ಬಳಸಿ ಸೇತುವೆಯನ್ನು ನಿರ್ಮಿಸಲು ಯೋಜಿಸಿದರು. ಈ ಕಾರ್ಯದಲ್ಲಿ ಅವರ ತಂದೆ ಕೈಲಾಶ್ ಅವರಿಗೆ ಸಹಾಯ ಮಾಡಲು ಹೋಗುತ್ತಿದ್ದರು.
ಆದರೆ ಅವರು ಕಾಮಗಾರಿ ಪ್ರಾರಂಭಿಸಿದ ಸ್ವಲ್ಪ ಸಮಯದ ನಂತರ, ಅವರು ಆರಂಭದಲ್ಲಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಕಂಬಗಳು ಮತ್ತು ಬಿದಿರು ಅಗತ್ಯವಿದೆ ಎಂದು ಅವರು ಅರಿತುಕೊಂಡರು. ಆದರೆ ಅವರು ಹಿಂದೆ ಸರಿಯಲು ಸಿದ್ಧರಿರಲಿಲ್ಲ.
ನಾಯಕ್ ನಂತರ ಮಾರುಕಟ್ಟೆಯಿಂದ ಬಿದಿರು ಮತ್ತು ಮರದ ಕಂಬಗಳನ್ನು ಖರೀದಿಸಲು ತಮ್ಮ ಕುಂಟುಂಬದಲ್ಲಿದ್ದ ಬೆಲೆಬಾಳುವ ವಸ್ತುವಾದ ಪತ್ನಿಯ ಆಭರಣವನ್ನು 70,000 ರು. ಗಳಿಗೆ ಗಿರವಿ ಇಡಲು ನಿರ್ಧರಿಸಿದರು. “ನಾನು ಮತ್ತು ತಂದೆ ಏನು ಕಷ್ಟ ಬಂದರೂ ಸೇತುವೆ ನಿರ್ಮಾಣ ನಿಲ್ಲಿಸುವುದಿಲ್ಲ ಎಂದು ನಿರ್ಧರಿಸಿದೆವು. ನಾನು ನನ್ನ ಡ್ರೈವಿಂಗ್ ಕೆಲಸದಿಂದ ವಿರಾಮ ತೆಗೆದುಕೊಂಡು ಸೇತುವೆಯ ಮೇಲೆ ಕೆಲಸ ಮಾಡುತ್ತಿದ್ದೇನೆ” ಎಂದು ನಾಯಕ್ ಹೇಳಿದರು. ಅವರು ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದು, ತಮ್ಮ ಗ್ರಾಮವಾದ ಗುಂಜರಾಂಪಂಜರಕ್ಕೆ ನವೆಂಬರ್‌ನಲ್ಲಿ ಸೇತುವೆಯನ್ನು ಪೂರ್ಣಗೊಳಿಸಿದ್ದಾರೆ.
ತಂದೆ ಮಗನ ಕಾರ್ಯಕ್ಕೆ ಗ್ರಾಮಸ್ಥರು ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಮ್ಮೆ ನಾವು ನದಿಯನ್ನು ದಾಟಿದರೆ, ರಸ್ತೆಯ ಸ್ಥಿತಿ ಉತ್ತಮವಾಗಿರುವುದರಿಂದ ಕಾಳಹಂಡಿ ಜಿಲ್ಲೆಯ ಜೈಪಟ್ನಾ ಬ್ಲಾಕ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಪ್ರಯಾಣಿಸಲು ಸುಲಭವಾಗಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಬಿದಿರಿನ ಸೇತುವೆ ಅಲುಗಾಡಿದರೂ ದ್ವಿಚಕ್ರ ವಾಹನ ಸಂಚರಿಸುವಷ್ಟು ಉತ್ತಮವಾಗಿದೆ ಎಂದು ಅವರು ಹೇಳಿದ್ದಾರೆ. ನಾಯಕ್ ಅವರ ನಿಸ್ವಾರ್ಥ ಸೇವೆಯ ಕಥೆ ಹೊರಬರುತ್ತಲೇ ಸಾಮಾಜಿಕ ತಾಣಗಳಲ್ಲಿ ಜನರು ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.