ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾ ಭೀಕರ ರೈಲು ದುರಂತ ಕಾರಣ ವಿಪಕ್ಷಗಳು ಆಕ್ರೋಶ ಹೊರಹಾಕುತ್ತಿವೆ. ರೈಲ್ವೆ ಸಚಿವರ ರಾಜೀನಾಮೆಗೂ ಆಗ್ರಹ ಕೇಳಿಬಂದಿದೆ.
ನಿನ್ನೆ ರಾತ್ರಿ ಒಡಿಶಾದ ಬಾಲಸೋರ್‌ನಲ್ಲಿ 3 ರೈಲು ಡಿಕ್ಕಿಯಿಂದ ಸಂಭವಿಸಿದ ರಣಭೀಕರ ಅಪಘಾತಕ್ಕೆ ಈವರೆಗೂ 261 ಜನ ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದೇ ಸಂದರ್ಭದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆಗೆ ವಿಪಕ್ಷಗಳ ನಾಯಕರು ಆಗ್ರಹಿಸುತ್ತಿದ್ದಾರೆ. ಅದರಲ್ಲೂ ಶರದ್ ಪವಾರ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಭೀಕರ ರೈಲು ದುರಂತದ ಬಗ್ಗೆ ಮಾತನಾಡಿರುವ ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್, ಹಿಂದೆ ರೈಲು ದುರಂತ ನಡೆದಾಗ ಅದರ ಸಂಪೂರ್ಣ ಹೊಣೆ ಹೊತ್ತು ರೈಲ್ವೆ ಸಚಿವರು ರಾಜೀನಾಮೆ ನೀಡುತ್ತಿದ್ದರು. ಆದ್ರೆ ಈಗ ಆ ಬಗ್ಗೆ ಯಾರೂ ಮಾತನಾಡಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಇದೊಂದು ದುರದೃಷ್ಟಕರ ಘಟನೆ ದೇಶದಲ್ಲಿ ಇಂತಹ ದೊಡ್ಡಮಟ್ಟದ ರೈಲು ಅಪಘಾತ ಹಿಂದೆಂದೂ ನಡೆದಿರಲಿಲ್ಲ. ಸರ್ಕಾರ ರೈಲು ದುರಂತದ ಬಗ್ಗೆ ತಕ್ಷಣ ತನಿಖೆ ನಡೆಸಬೇಕಿದೆ. ಅಪಘಾತಕ್ಕೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಶರದ್ ಪವಾರ್ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಒಡಿಶಾ ಸಂಸದ ಸಪ್ತಗಿರಿ ಉಲಾಖ ಸೇರಿದಂತೆ ಎಐಸಿಸಿ ಅಧ್ಯಕ್ಷರ ಕಚೆರಿ ಸಂಯೋಜಕ ಗುರುದೀಪ್ ಸಪ್ಪಾಲ್, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಹಲವರು ರೈಲ್ವೆ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.