ಚಿತ್ರದುರ್ಗ ತಾಲ್ಲೂಕಿನ ವಿವಿಧೆಡೆಗಳಲ್ಲಿ 11 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ : ಶಾಸಕ ತಿಪ್ಪಾರೆಡ್ಡಿ

ಹೊಸ ದಿಗಂತ ವರದಿ ,  ಚಿತ್ರದುರ್ಗ:

ತಾಲ್ಲೂಕಿನ ವಿವಿಧೆಡೆಗಳಲ್ಲಿ ಒಟ್ಟು 11  ಕೋಟಿ ವೆಚ್ಚದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಹಾಗೂ ಪಿಎಂಜಿಎಸ್‌ವೈ ಯೋಜನೆಯಡಿ ರಸ್ತೆಗಳನ್ನು ಮರು ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.
ಚಿತ್ರದುರ್ಗ ತಾಲ್ಲೂಕಿನ ಲಕ್ಷ್ಮೀಸಾಗರ, ಕಿಟ್ಟದಹಟ್ಟಿ, ವಡ್ಡರಸಿದ್ದವ್ವನಹಳ್ಳಿ, ಚಿಕ್ಕಾಲಗಟ್ಟ, ದೊಡ್ಡಾಲಗಟ್ಟ ಗ್ರಾಮಗಳಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಮತ್ತು ಪಿಎಂಜಿಎಸ್‌ವೈ ಯೋಜನೆಯಲ್ಲಿ ನಿರ್ಮಿಸುತ್ತಿರುವ ರಸ್ತೆ ಮರುಡಾಂಬರೀಕರಣ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ. ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ದೇಶದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಅವರು ೩೦ ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅನುದಾನ ನೀಡಿದ್ದಾರೆ. ವಡ್ಡರಸಿದ್ದವ್ವನಹಳ್ಳಿ, ಕೋಣನೂರು, ಭೀಮಸಮುದ್ರ, ತೊರೇಬೈಲು ರಸ್ತೆ, ನೀಲಯ್ಯನಹಟ್ಟಿಯಿಂದ ದ್ಯಾಮನಹಳ್ಳಿ, ದೊಡ್ಡಾಲಗಟ್ಟದಿಂದ ಸಿರಿಗೆರೆ ಗ್ರಾಮದವರೆಗಿನ ರಸ್ತೆಗಳನ್ನು ಪಿಎಂಜಿಎಸ್‌ವೈ ಅನುದಾನದಲ್ಲಿ ಮಾಡಲಾಗುತ್ತಿದೆ ಎಂದರು.
ಲಕ್ಷ್ಮೀಸಾಗರ, ಕಿಟ್ಟದಹಟ್ಟಿ, ಚಿಕ್ಕಾಲಗಟ್ಟ ಗ್ರಾಮದವರೆಗೆ ೨.೧ ಕಿ.ಮೀ.ನಷ್ಟು ರಸ್ತೆಯನ್ನು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ೨೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಲಕ್ಷ್ಮೀಸಾಗರ ಗ್ರಾಮದ ಸಿ.ಸಿ.ರಸ್ತೆಗೆ ೪೦ ಲಕ್ಷ ಹಣ ನೀಡಿದ್ದು, ಕೆಲವೇ ದಿನಗಳಲ್ಲಿ ಕೆಲಸ ಪ್ರಾರಂಭ ಮಾಡಲಾಗುತ್ತದೆ. ಅದರಂತೆ ೨ ಕೋಟಿ ವೆಚ್ಚದಲ್ಲಿ ಲಕ್ಷ್ಮಿಸಾಗರ ಕೆರೆಯ ಕಟ್ಟೆ ಭದ್ರಗೊಳಿಸಿ ಕೆರೆ ಊಳು ತೆಗೆಸುವ ಮೂಲಕ ಅಂತರ್ಜಲ ವೃದ್ಧಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಲಕ್ಷ್ಮೀಸಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು ೧೫ ಕೋಟಿಗಿಂತ ಹೆಚ್ಚು ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ. ಈಗ ರೈತರು ಲಕ್ಷ್ಮೀಸಾಗರ ಕೆರೆ ಅಭಿವೃದ್ಧಿಗೆ ಹಣ ಕೇಳಿದ್ದು ೨ ಕೋಟಿ ಹಣ ಕೆರೆಯ ಏರಿ ಅಭಿವೃದ್ಧಿ, ಜಂಗಲ್ ಕಟ್ಟಿಂಗ್, ಕೋಡಿ ಭದ್ರಗೊಳಿಸುವಿಕೆಗೆ ಹಣ ನೀಡಲಾಗುವುದು. ಕಡಿಮೆ ಬಂದರೆ ಮತ್ತೆ ಹಣ ನೀಡುತ್ತೇನೆ. ಲಕ್ಷ್ಮೀಸಾಗರ ಕೆರೆ ದೊಡ್ಡ ಕೆರೆಯಾಗಿದ್ದು, ಈ ಕೆರೆಯ ಅಭಿವೃದ್ಧಿಯಿಂದ ಸಾವಿರಾರು ಬೋರವೆಲ್‌ಗೆ ಅನುಕೂಲವಾಗುತ್ತದೆ. ಜೊತೆಗೆ ಸಿರಿಗೆರೆ ಶ್ರೀಳು ಈ ಕೆರೆ ನೀರುಣಿಸುವ ಕೆಲಸ ಮಾಡುತ್ತಿದ್ದು, ನೀರು ಹರಿಯುವ ವೇಳೆಗೆ ಕೆರೆ ಸಂಪೂರ್ಣ ಭದ್ರವಾಗಿರಬೇಕು ಎಂಬ ದೃಷ್ಟಿಯಿಂದ ಹಣ ನೀಡಲಾಗಿದೆ. ಊರಿನವರೆಲ್ಲಾ ಸೇರಿ ಜವಾಬ್ಧಾರಿಯಿಂದ ಕೆಲಸಗಳನ್ನು ಮಾಡಿಸಿಕೊಳ್ಳಿ ಎಂದರು.
ಲಕ್ಷ್ಮೀಸಾಗರ ಗ್ರಾಮದ ದೇವಸ್ಥಾನಕ್ಕೆ ೫ ಲಕ್ಷ ಹಣ ನೀಡಿದ್ದೇನೆ. ಕಿಟ್ಟದಹಟ್ಟಿ ಜನರು ಬಸ್ ಸೌಲಭ್ಯ ಕೇಳಿದ್ದು, ಈ ಭಾಗದ ಸಾರ್ವಜನಿಕರು ಸೇರಿ ಬಸ್ ಸಂಚರಿಸುವ ಮಾರ್ಗದ ಬಗ್ಗೆ ಮಾಹಿತಿ ನೀಡಿದಲ್ಲಿ ಬಂದರೆ ಮಾರ್ಗ ತಿಳಿಸಿದರೆ ಚಿತ್ರದುರ್ಗ ವಿಭಾಗೀಯ ಕಚೇರಿ ಅಧಿಕಾರಿಗಳಿಗೆ ತಿಳಿಸಿ ಸರ್ವೆ ಮಾಡಿಸಿ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಸದಸ್ಯರಾದ ಪಾಡುರಂಗಪ್ಪ, ಶೋಭಾ, ಶಿವಮ್ಮ, ವಸಂತಕುಮಾರ್, ರಾಮಾಂಜನೇಯ, ಅಶೋಕ್‌ಕುಮಾರ್, ಧನಂಜಯ, ಕವಿತಾ ಮತ್ತು ಪಿಎಂಜಿಎಸ್‌ವೈ ಯೋಜನೆ ಇಂಜಿನಿಯರ್ ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!