ಹೊಸ ದಿಗಂತ ವರದಿ, ಸುಂಟಿಕೊಪ್ಪ:
ಮೇಯಲು ಕಟ್ಟಿಹಾಕಿದ್ದ ಹಸುವಿನ ಮೇಲೆ ಅನೈಸರ್ಗಿಕ ಕೃತ್ಯ ಎಸಗುತ್ತಿದ್ದ ವ್ಯಕ್ತಿಯೊಬ್ಬನನ್ನು ಸ್ಥಳೀಯ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಭಾನುವಾರ (ನ.27ರಂದು) ಈ ಕೃತ್ಯ ಬೆಳಕಿಗೆಗೆ ಬಂದಿದ್ದು, ಪೊಲೀಸರು ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಪೊಲೀಸ್ ಮಾಹಿತಿಯ ಪ್ರಕಾರ ಸುಂಟಿಕೊಪ್ಪ ಸಮೀಪದ ಅಂದಗೋವೆ ಗ್ರಾಮದ ಸಿ.ಎ.ದೇವಯ್ಯ ಅವರಿಗೆ ಸೇರಿದ ಹಸುವನ್ನು ಮೇಯಲು ಬಿಟ್ಟಿದ್ದು ತಾವು ಸಂತೆಗೆ ಹೋಗಿ ವಾಪಾಸ್ಸು ಬರುವ ಸಂದರ್ಭ ತಮ್ಮ ಗದ್ದೆಯ ದಾರಿಯಲ್ಲಿ ಕೆಂಪು ಬಣ್ಣದ ಕೆಎ-09-ಇಎಸ್ 6223 ಮೋಟಾರ್ ಬೈಕ್ ನಿಂತಿದ್ದನ್ನು ಗಮನಿಸಿದ್ದಾರೆ.
ದೇವಯ್ಯ ಅವರು ಮನೆಗೆ ಹೋಗಿ ತಮ್ಮ ಬಟ್ಟೆ ಹಾಗೂ ಶೂಗಳನ್ನು ಬದಲಾಯಿಸಿ ಪವನ್ ಎಂಬವರೊಂದಿಗೆ ಮೇಯಲು ಬಿಟ್ಟಿದ್ದ ಹಸುವನ್ನು ವಾಪಾಸ್ಸು ಕೊಟ್ಟಿಗೆಗೆ ತರಲು ಹೋದ ಸಂದರ್ಭ ಅಪರಿಚಿತ ವ್ಯಕ್ತಿಯೊಬ್ಬ ಹಸುವಿನ ಮೇಲೆ ಪೈಶಾಚಿಕ ಕೃತ್ಯ ಎಸುಗುತ್ತಿರುವುದನ್ನು ನೋಡಿ ಆತನನ್ನು ಹಿಡಿದು ವಿಚಾರಿಸಿದಾಗ, ಸುಂಟಿಕೊಪ್ಪ ಪಂಪ್ ಹೌಸ್ ನಿವಾಸಿ ಅಬೂಬಕ್ಕರ್ ಸಿದ್ಧಿಕ್ ಎಂದು ತಿಳಿದು ಬಂದಿದೆ.
ಈ ಕುರಿತು ದೂರು ನೀಡಿ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಭಾರತೀಯ ದಂಡ ಸಂಹಿತೆ ಕಲಂ 377 ಪ್ರಕಾರ ಮೊಕದ್ದಮೆ ದಾಖಲಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.
ಒಂದು ರೀತಿಯಲ್ಲಿ ತೀರಾ ಅನೈತಿಕ ಮತ್ತು ಪೈಶಾಚಿಕ ಕೃತ್ಯದ ಬಗ್ಗೆ ಜನವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಆರೋಪಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯಾಗುವ ಮೂಲಕ ಮುಂದೆಂದೂ ಈ ರೀತಿಯ ಅನಾಗರಿಕ ಮತ್ತು ಅನೈತಿಕ ಪ್ರಕರಣಗಳು ನಡೆಯದಂತಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.