ಆಕ್ಷೇಪಾರ್ಹ ಹೇಳಿಕೆ: ಚಾಮುಂಡೇಶ್ವರಿ ಭಕ್ತರಿಗೆ ಕ್ಷಮೆ ಕೇಳಿದ ರಕ್ಷಕ್ ಬುಲೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್​ಬಾಸ್ ಮಾಜಿ ಸ್ಪರ್ಧಿ, ನಟ ರಕ್ಷಕ್ ಬುಲೆಟ್ ಚಾಮುಂಡಿ ತಾಯಿ ಭಕ್ತರಿಗೆ ಕ್ಷಮೆ ಕೇಳಿದ್ದಾರೆ.

ಇತ್ತೀಚೆಗೆ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದಾಗ ಚಾಮುಂಡೇಶ್ವರಿ ತಾಯಿ ಬಗ್ಗೆ ಆಡಿದ್ದ ಮಾತೊಂದು ವಿವಾದಕ್ಕೆ ಕಾರಣವಾಗಿತ್ತು. ದೇವರ ಬಗ್ಗೆ ರಕ್ಷಕ್ ಆಡಿದ್ದ ಮಾತಿನ ಬಗ್ಗೆ ಚಾಮುಂಡೇಶ್ವರಿ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ರಕ್ಷಿತ್ ಕ್ಷಮೆ ಕೋರಿದ್ದಾರೆ.

‘ಭರ್ಜರಿ ಬ್ಯಾಚುಲರ್ಸ್’ ಸೀಸನ್ 2ರ ಸ್ಪರ್ಧಿಯಾಗಿರುವ ರಕ್ಷಕ್, ಯುವತಿಯನ್ನು ಇಂಪ್ರೆಸ್ ಮಾಡಲು ಡೈಲಾಗ್ ಹೇಳುತ್ತಾ, ಚಾಮುಂಡಿ ತಾಯಿಯ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ್ದರು. ಚಾಮುಂಡಿದೇವಿ ಜೀನ್ಸ್ ಹಾಕಿ ಗೋವಾ ಟ್ರಿಪ್​ಗೆ ಹೋದಂತಿದೆ ಎಂದೆಲ್ಲ ಮಾತನಾಡಿದ್ದರು. ಇದು ಹಿಂದೂಪರ ಸಂಘಟನೆಗಳು, ಚಾಮುಂಡೇಶ್ವರಿ ದೇವಾಲಯ ಭಕ್ತರನ್ನು ಕೆರಳಿಸಿತ್ತು. ರಕ್ಷಕ್, ಡೈಲಾಗ್​ಗೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದೀಗ ವಿವಾದ ಉಲ್ಬಣವಾದಂತೆ ಸಾಮಾಜಿಕ ಜಾಲತಾಣದ ಮೂಲಕ ‘ನಾನು ನಿಮ್ಮ ರಕ್ಷಕ್ ಬುಲೆಟ್, ಇತ್ತೀಚಿಗೆ ಒಂದು ರಿಯಾಲಿಟಿ ಶೋನಲ್ಲಿ ನಾನು ಒಂದು ಹೆಸರಾಂತ ಚಿತ್ರದ ಡೈಲಾಗನ್ನು ಒಂದು ಸ್ಕಿಟ್ ನಲ್ಲಿ ಹೇಳಿದ್ದೆ, ಅದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನನ್ನ ತಂದೆಯವರಾದ ದಿವಂಗತ ಬುಲೆಟ್ ಪ್ರಕಾಶ್ ಅವರು, ನನ್ನ ತಾಯಿಯವರು ಹಾಗೂ ಎಲ್ಲಾ ನಮ್ಮ ಕುಟುಂಬದವರು ಪರಮ ದೈವ ಭಕ್ತರು, ನಮ್ಮ ತಂದೆಯವರಿದ್ದಾಗನಿಂದಲೂ ನಾವು ತಾಯಿ ಚಾಮುಂಡೇಶ್ವರಿಗೆ ಪೂಜೆ ಮಾಡುತ್ತಾ ನಡೆದುಕೊಂಡು ಬಂದಿದ್ದೇವೆ, ನಾನು ಉದ್ದೇಶಪೂರ್ವಕವಾಗಿ ತಾಯಿ ಚಾಮುಂಡೇಶ್ವರಿಯ ಕುರಿತು ಹೇಳುವಷ್ಟು ದೊಡ್ಡವನಲ್ಲ, ತಾಯಿಯ ಆಶೀರ್ವಾದದಿಂದ ನಾನು ಬೆಳೆಯುತ್ತಿದ್ದೇನೆ. ನಾನು ಯಾವುದೇ ಕಾರ್ಯ ಪ್ರಾರಂಭಿಸಬೇಕಾದರೆ ಮೊದಲು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ನಂತರ ಕೆಲಸವನ್ನು ಪ್ರಾರಂಭ ಮಾಡುತ್ತೇನೆ. ನಾನು ಭಕ್ತಾದಿಗಳ ಭಾವನೆಗಳಿಗಾಗಲಿ ಮನಸ್ಸಿಗಾಗಲಿ ನೋವನ್ನು ಉಂಟು ಮಾಡುವ ಕೆಲಸ ಮಾಡುವುದಿಲ್ಲ. ಯಾರಿಗಾದರೂ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಮುಂದೆ ಇಂತಹ ಅಚಾತುರ್ಯ ನಡೆಯುವುದಿಲ್ಲ’ ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!