ಉಪ್ಪಿನ ಸತ್ಯಾಗ್ರಹ ವೇಳೆ ನೀರು ಸಂಗ್ರಹಿಸಲು ನಿರ್ಮಿಸಿದ ಪೂಜಗೇರಿ ಹಳ್ಳಕ್ಕೆ ಬಾಗಿನ ಅರ್ಪಣೆ

ಹೊಸದಿಗಂತ ವರದಿ ಅಂಕೋಲಾ :

ತಾಲೂಕಿನಲ್ಲಿ ನಡೆದ ಐತಿಹಾಸಿಕ ಉಪ್ಪಿನ ಸತ್ಯಾಗ್ರಹದ ವೇಳೆ ಉಪ್ಪು ತಯಾರಿಸಲು ನೀರು ಸಂಗ್ರಹಿಸಿದ ಪೂಜಗೇರಿ ಹಳ್ಳಕ್ಕೆ ಕಡಲು ಪ್ರಕಾಶನ ಮಂಜಗುಣಿ ಹಾಗೂ ಮತ್ತಿತರ ಸಂಘಟನೆಗಳ ವತಿಯಿಂದ ಬಾಗಿನ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿರಿಯ ಕತೆಗಾರ, ಯಕ್ಷಗಾನ ಕಲಾವಿದ ರಾಮಕೃಷ್ಣ ಗುಂದಿ ಮಾತನಾಡಿ, ಉಪ್ಪಿನ ಸತ್ಯಾಗ್ರಹ ಅಂಕೋಲೆಯ ಸ್ವಾತಂತ್ರ್ಯ ಹೋರಾಟದ ಅವಿಸ್ಮರಣೀಯ ಘಟನೆಯಾಗಿದ್ದು, ತಾಲೂಕಿಗೆ ಕರ್ನಾಟಕದ ಬಾರ್ಡೋಲಿ ಎಂಬ ಕೀರ್ತಿ ತಂದುಕೊಟ್ಟ ಚಾರಿತ್ರಿಕ ಘಟನೆಯನ್ನು ವಿಶೇಷ ರೀತಿಯಲ್ಲಿ ನೆನಪಿಸಿಕೊಳ್ಳುತ್ತ ಬಂದಿರುವ ಕಡಲು ಪ್ರಕಾಶನ ಮತ್ತು ಸಮಾನ ಮನಸ್ಕರ ಕೆಲಸ ಮೆಚ್ಚುವಂತದ್ದು ಎಂದರು.

ಇತಿಹಾಸವನ್ನು ಸ್ಮರಿಸುವ ಕೆಲಸ ಸದಾ ಕಾಲ ನಡೆಯುತ್ತಲೇ ಇರಬೇಕು. ಅಂಕೋಲೆಯ ಸ್ವಾತಂತ್ರ್ಯ ಹೋರಾಟದ ಇತಿಹಾಸ ಯುವ ಜನರಿಗೆ ಪ್ರೇರಣೆಯಾಗಬೇಕು. ಪೂಜಗೇರಿ ಹಳ್ಳಕ್ಕೆ ಬಾಗಿನ ಸಮರ್ಪಿಸುವ ಮೂಲಕ ಸಂಘಟಕರು ಇತಿಹಾಸ ಸ್ಮರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ ಮಾತನಾಡಿ, ಪೂಜಗೇರಿ ಹಳ್ಳದ ನೀರನ್ನು ತೆಗೆದುಕೊಂಡು ಹೋಗಿ ಕಾಯ್ದೆ ಭಂಗ ಮಾಡುವ ಮೂಲಕ ಬ್ರಿಟಿಷರ ವಿರುದ್ಧ ನಡೆದ ಜನಸಾಮಾನ್ಯರ ಹೋರಾಟ ನಮ್ಮ ಪೀಳಿಗೆಗೆ ತಲುಪಿಸುವ ಕೆಲಸ ಆಗಬೇಕೀದೆ. ಈ ದಿಶೆಯಲ್ಲಿ
ಅವಿಸ್ಮರಣೀಯ ಹೋರಾಟವನ್ನು ಸ್ಮರಣೀಯಗೊಳಿಸುವಂತ ಉತ್ತಮ ಕಾರ್ಯಕ್ರಮವನ್ನು ಕಡಲು ಪ್ರಕಾಶನ ನಡೆಸಿದೆ ಎಂದರು.

ಸಾಹಿತಿ ಮಹಾಂತೇಶ ರೇವಡಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ ಮತ್ತಿತರ ಘಟನೆಗಳು ಇಂದಿನ ಬಹಳಷ್ಟು ಯುವಜನರಿಗೆ ಗೊತ್ತಿಲ್ಲ, ಅದನ್ನು ತಿಳಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಲಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ವಕೀಲ ಉಮೇಶ ನಾಯ್ಕ, ಸಾಮಾಜಿಕ ಕಾರ್ಯಕರ್ತ ಶ್ರೀಪಾದ ನಾಯ್ಕ ಮಾತನಾಡಿದರು. ಚಿನ್ನದಗರಿ ಯುವಕ ಸಂಘದ ಗೌರವಾಧ್ಯಕ್ಷ ವಿಲಾಸ ನಾಯಕ ಉಪಸ್ಥಿತರಿದ್ದರು.

ಕಡಲು ಪ್ರಕಾಶನದ ಸಂಚಾಲಕ ನಾಗರಾಜ ಮಂಜಗುಣಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವಿದ್ಯಾಧರ ಮೊರಬಾ ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!