ಹೊಸದಿಗಂತ ವರದಿ ಮೈಸೂರು:
ನಾಡ ದೇವತೆ ಶ್ರೀ ಚಾಮುಂಡೇಶ್ವರಿಯ ನೆಲೆವೀಡಾದ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಮೈಸೂರು ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಿತು.
ಭಾನುವಾರ ಬೆಳಿಗ್ಗೆ 10:15 ರಿಂದ 10.36 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಖ್ಯಾತ ಸಿನಿಮಾ ಸಾಹಿತಿ ಹಾಗೂ ಚಲನಚಿತ್ರ ಸಂಗೀತ ನಿರ್ದೇಶಕ ನಾದಬ್ರಹ್ಮ ಡಾ.ಹಂಸಲೇಖ ಅವರು ರಥದಲ್ಲಿ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಾಥ್ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜಿ.ಟಿ ದೇವೇಗೌಡ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ತಂಗಡಗಿ ಶಿವರಾಜ್ ಸಂಗಪ್ಪ, ಇಂಧನ ಸಚಿವರಾದ ಕೆ.ಜೆ ಜಾರ್ಜ್, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಟಿ.ಎಸ್.ಶ್ರೀ ವತ್ಸ, ಕೆ.ಹರೀಶ್ ಗೌಡ, ಎ.ಆರ್.ಕೃಷ್ಣ ಮೂರ್ತಿ, ದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ಕ ಮಾಧು, ಡಿ.ರವಿಶಂಕರ್ , ತನ್ವೀರ್ ಸೇಠ್, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಶಿವಕುಮಾರ್, ಉಪಮೇಯರ್ ರೂಪಾ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಉಪಸ್ಥಿತರಿದ್ದರು.