ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿ ಎಂದು ಎಲ್ಲರಿಗು ಗೊತ್ತೇ ಇರುವ ವಿಷಯ. ಸಮಯ ಸಿಕ್ಕಾಗಲೆಲ್ಲಾ ಪ್ರಧಾನಿ ಮೋದಿಯವರನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಲೇ ಇರುತ್ತಾರೆ.
ಅಷ್ಟೇ ಅಲ್ಲದೆ ಮೋದಿಯವರ ಸ್ವಚ್ಛ ಭಾರತದ ಕುರಿತು ‘ಟಾಯ್ಲೆಟ್: ಏಕ್ ಪ್ರೇಮ್‌ಕಥಾ’, ಮಂಗಳಯಾನ ಯಶಸ್ಸಿನ ಬಗ್ಗೆ ‘ಮಿಷನ್ ಮಂಗಳ್’ ಚಿತ್ರಗಳಲ್ಲಿ ನಟಿಸಿದ್ದರು.
ಆ ಬಳಿಕ 2019ರಲ್ಲಿ ಪ್ರಧಾನಿಯವರ ಸಂದರ್ಶನ ಮಾಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಮೂಲಕ ರಾಜಕೀಯಕ್ಕೆ ಬರುತ್ತಾರಾ ಎಂಬ ಊಹಾಪೋಹಗಳು ಹರಿದಾಡಿತ್ತು.
ಪರ-ವಿರೋಧ ನಿಲುವುಗಳು ವ್ಯಕ್ತವಾಗಿದ್ದವು.ಆದ್ರೆ ಯಾವುದಕ್ಕೂ ತಲೆಕೆಡಿಸದ ಅಕ್ಷಯ್ ಕುಮಾರ್ ಮಾತ್ರ ಮೋದಿಯವರನ್ನು ಹೊಗಳುವುದನ್ನು ನಿಲ್ಲಿಸುತ್ತಿಲ್ಲ. ಪ್ರಧಾನಿಯನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸುತ್ತಲೇ ಇರುತ್ತಾರೆ.
ಇದೀಗ ವಿದೇಶ ಪ್ರವಾಸದಲ್ಲಿರುವ ನಟ ಅಕ್ಷಯ್ ಕುಮಾರ್, ಅಲ್ಲಿ ತಮ್ಮನ್ನು ಯಾವ ರೀತಿ ನೋಡುತ್ತಾರೆ ಎನ್ನುವ ಕುರಿತು ಮಾತನಾಡಿದ್ದಾರೆ. ಭಾರತದ ಪಾಸ್‌ಪೋರ್ಟ್ ಹಿಡಿದು ಯಾವುದೇ ದೇಶದ ವಲಸೆ ಕಚೇರಿಗೆ ಹೋದರೂ ಅಲ್ಲಿ ಗೌರವದಿಂದ ನೋಡುತ್ತಾರೆ. ಓಹ್! ನೀವು ಮೋದಿಯ ದೇಶದಿಂದ ಬಂದವರಾ? ಎನ್ನುತ್ತಾರೆ. ಇಂಥ ಗೌರವವನ್ನು ನಾನು ಈ ಹಿಂದೆ ಎಂದಿಗೂ ಪಡೆದೇ ಇಲ್ಲ ಎಂದಿದ್ದಾರೆ ಅಕ್ಷಯ್ ಕುಮಾರ್.
ಭಾರತ ಮುಂದುವರಿಯುತ್ತಿದೆ. ಇದು ವಿಶ್ವ ಖ್ಯಾತಿ ಗಳಿಸುತ್ತಿದೆ. ಭಾರತದ ಪಾಸ್‌ಪೋರ್ಟ್ ತೋರಿಸಿದರೆ ಇದು ಮೋದಿಯವರ ಭಾರತ ಅಲ್ಲವೆ ಎಂದು ಕೇಳುವಷ್ಟರ ಮಟ್ಟಿಗೆ ಭಾರತ ಸಾಗಿದೆ. ಹೀಗೆ ಹೇಳಿ ನನಗೆ ನೀಡುವ ಗೌರವವೇ ಅತ್ಯದ್ಭುತವಾದದ್ದು ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ನಾನು ‘ಟಾಯ್ಲೆಟ್: ಏಕ್ ಪ್ರೇಮ್‌ಕಥಾ’ ಹಾಗೂ ‘ಮಿಷನ್ ಮಂಗಳ್’ನಲ್ಲಿ ನಟಿಸಿದ್ದೆ. ಇದು ಬಿಜೆಪಿ ಅಧಿಕಾರಾವಧಿಯದ್ದು. ಆದರೆ ಇಷ್ಟೇ ಅಲ್ಲದೇ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಘಟನೆಗಳ ಕುರಿತ ‘ಏರ್‌ಲಿಫ್ಟ್’ ಹಾಗೂ ‘ಮಿಷನ್ ರಾಣಿಗಂಝ್’ ಚಿತ್ರಗಳಲ್ಲೂ ನಟಿಸಿದ್ದೇನೆ. ಆದರೆ, ಆಗ ಯಾರೂ ಮಾತನಾಡಲಿಲ್ಲ. ಈಗ ಭಾರತವನ್ನು ಎಲ್ಲರೂ ನೋಡುತ್ತಿದ್ದಾರೆ. ಯಾವಾಗ ಒಳ್ಳೆಯ ಘಟನೆಗಳು ನಡೆದವು ಎನ್ನುವುದು ಮುಖ್ಯವಾಗುತ್ತದೆಯೇ ಹೊರತು ಯಾರ ಆಡಳಿತ ಆಗ ಇತ್ತು ಎಂಬುದು ಮುಖ್ಯವಲ್ಲ. ದೇಶದ ಒಳಿತಿಗೆ ಏನೆಲ್ಲಾ ಕೆಲಸಗಳಾದವು ಎಂಬುದು ಮುಖ್ಯವಾಗುತ್ತವೆ. ಈಗ ದೇಶದ ಒಳಿತಾಗುತ್ತಿದೆ. ಇದೇ ಕಾರಣಕ್ಕೆ ವಿದೇಶಗಳಿಗೆ ಹೋದಾಗಲೂ ಇಷ್ಟೊಂದು ಮನ್ನಣೆ ಸಿಗುತ್ತಿದೆ ಎಂದಿದ್ದಾರೆ.