ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಮೀಸಲಾತಿ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ಈಗ ಸಂಘರ್ಷದ ಕಿಚ್ಚು ಹತ್ತಿಕೊಂಡಿದೆ. ಮೀಸಲಾತಿ ಜಾರಿಗೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಘಟಕವು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಮುಂದಾಗಿದೆ.
ನಗರದ ಆರ್.ವಿ ಕಾಲೇಜು ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತೆಯರು ಕಪ್ಪು ಪಟ್ಟಿ ಧರಿಸಿ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಸದ ತೇಜಸ್ವಿ ಸೂರ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಹೆಣ್ಣು ಮಕ್ಕಳು ಅಧಿಕಾರದಲ್ಲಿ ಸಮಪಾಲು ಪಡೆಯುವುದನ್ನು ಕಾಂಗ್ರೆಸ್ ಸಹಿಸುತ್ತಿಲ್ಲ. ಮೀಸಲಾತಿ ಬಿಲ್ ಜಾರಿಯಾಗುವುದು ನೂರಕ್ಕೆ ನೂರು ಸತ್ಯ, ಸ್ವಲ್ಪ ವಿಳಂಬವಾದರೂ ಬಿಜೆಪಿ ಇದನ್ನು ಮಾಡಿಯೇ ತೀರುತ್ತದೆ,” ಎಂದು ಅವರು ಭರವಸೆ ನೀಡಿದರು.
ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸಿ ಐದು ಪಾಲಿಕೆಗಳನ್ನಾಗಿ ಮಾಡುತ್ತಿರುವ ಸರ್ಕಾರದ ನಿರ್ಧಾರವನ್ನು ಸಂಸದರು ಟೀಕಿಸಿದರು. “ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾಗಿದೆ ಎಂಬ ಕಾರಣ ನೀಡಿ ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 369ಕ್ಕೆ ಏರಿಸಲು ಮುಂದಾಗುವ ಕಾಂಗ್ರೆಸ್ ಸರ್ಕಾರಕ್ಕೆ, ಸಂಸತ್ ಮಟ್ಟದಲ್ಲಿ ಕ್ಷೇತ್ರ ಮರು ವಿಂಗಡಣೆ ಮಾಡಲು ಯಾಕೆ ಭಯ? ಸ್ಥಳೀಯವಾಗಿ ಕ್ಷೇತ್ರ ವಿಂಗಡಣೆ ಸರಿಯೆಂದಾದರೆ, ಸಂಸತ್ ಮಟ್ಟದಲ್ಲಿ ಅದಕ್ಕೆ ತಕರಾರು ಮಾಡುವುದು ಯಾವ ನ್ಯಾಯ?” ಎಂದು ಪ್ರಶ್ನಿಸಿದರು.
1992ರಿಂದಲೂ ಮಹಿಳಾ ಮೀಸಲಾತಿ ಬಗ್ಗೆ ಬಿಜೆಪಿ ಒಂದೇ ನಿಲುವನ್ನು ಹೊಂದಿದೆ. ಲೋಕಸಭೆಯಲ್ಲಿ ಬಿಲ್ ಬಂದಾಗಲೆಲ್ಲ ಬಿಜೆಪಿ ಬೆಂಬಲಿಸಿದೆ. ಆದರೆ ಕಾಂಗ್ರೆಸ್ ಮಾತ್ರ ಲಾಲೂ ಪ್ರಸಾದ್ ಯಾದವ್ ಮತ್ತು ಮುಲಾಯಂ ಸಿಂಗ್ ಅವರಂತಹ ನಾಯಕರ ಮೂಲಕ ಬಿಲ್ ಸೋಲಿಸುತ್ತಾ ಬಂದಿದೆ. 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಮಸೂದೆಗೆ 2023ರಲ್ಲಿ ಸಂವಿಧಾನ ತಿದ್ದುಪಡಿ ತಂದು ಅಂಗೀಕಾರ ಸಿಗುವಂತೆ ಮಾಡಿದ್ದು ಬಿಜೆಪಿ ಸರ್ಕಾರ ಎಂದು ತೇಜಸ್ವಿ ಸೂರ್ಯ ನೆನಪಿಸಿದರು.



