September 20, 2026
Sunday, September 20, 2026
spot_img

ಹಳೆ ಸಿನಿಮಾ, ಹೊಸ ಇತಿಹಾಸ! ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಮತ್ತೆ ‘ಅವೆಂಜರ್ಸ್: ಎಂಡ್‌ಗೇಮ್‌’ ಹವಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯಾದಲ್ಲಿ ಹಾಲಿವುಡ್ ಸಿನಿಮಾಗಳಿಗೆ ಇರೋ ಕ್ರೇಜ್‌ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ, ಅದರಲ್ಲೂ ‘ಮಾರ್ವೆಲ್’ ಸಿನಿಮಾಗಳೆಂದರೆ ನಮ್ಮ ಜನರಿಗೆ ಸಖತ್ ಇಷ್ಟ. ಇದೀಗ ಮತ್ತೊಮ್ಮೆ ಆ ಕ್ರೇಜ್ ಸಾಬೀತಾಗಿದೆ. 2019ರಲ್ಲಿ ರಿಲೀಸ್ ಆಗಿ ದಾಖಲೆ ಬರೆದಿದ್ದ ‘ಅವೆಂಜರ್ಸ್: ಎಂಡ್‌ಗೇಮ್‌’ ಸಿನಿಮಾ ‘ಅವೆಂಜರ್ಸ್: ಎಂಡ್‌ಗೇಮ್ ಎನ್‌ಕೋರ್’ ಹೆಸರಿನಲ್ಲಿ ಮತ್ತೆ ಚಿತ್ರಮಂದಿರಗಳಿಗೆ ಲಗ್ಗೆ ಇಡಲು ಸಜ್ಜಾಗಿದೆ. ಸಿನಿಮಾ ರಿಲೀಸ್ ಆಗೋಕೆ ಇನ್ನು ಒಂದು ವಾರ ಬಾಕಿ ಇರುವಾಗಲೇ ಅಡ್ವಾನ್ಸ್ ಬುಕಿಂಗ್‌ನಲ್ಲಿ ಧೂಳೆಬ್ಬಿಸುತ್ತಿದೆ.

ನ್ಯಾಷನಲ್ ಮಲ್ಟಿಪ್ಲೆಕ್ಸ್ ಚೈನ್ಸ್‌ಗಳಾದ PVR, Inox ಮತ್ತು ಸಿನಿಪೊಲಿಸ್‌ಗಳಲ್ಲಿ ಮೊದಲ ದಿನದ ಪ್ರದರ್ಶನಕ್ಕಾಗಿಯೇ ಬರೋಬ್ಬರಿ 35,000 ಟಿಕೆಟ್‌ಗಳು ಸೇಲ್ ಆಗಿಹೋಗಿವೆ. ಒಟ್ಟಾರೆಯಾಗಿ ಮೊದಲ ವಾರಾಂತ್ಯಕ್ಕೆ ಸುಮಾರು 1,25,000 ಟಿಕೆಟ್‌ಗಳು ಮಾರಾಟವಾಗಿದ್ದು, ಮೊದಲ ದಿನವೇ ಸುಮಾರು 50,000 ಜನ ಚಿತ್ರಮಂದಿರಕ್ಕೆ ಬರಲು ಸಿದ್ಧರಾಗಿದ್ದಾರೆ. ಬರೀ ಅಡ್ವಾನ್ಸ್ ಬುಕಿಂಗ್ ಒಂದರಲ್ಲೇ ಸಿನಿಮಾ 6.25 ಕೋಟಿ ಗಳಿಸಿ ದಾಖಲೆ ಬರೆದಿದೆ.

ಸಾಮಾನ್ಯವಾಗಿ ಹೊಸ ಸಿನಿಮಾಗಳಿಗೆ ಇಷ್ಟೊಂದು ದೊಡ್ಡ ಮಟ್ಟದ ಅಡ್ವಾನ್ಸ್ ಬುಕಿಂಗ್ ಇದ್ದರೆ ಮೊದಲ ದಿನವೇ 20 ಕೋಟಿ ಕಲೆಕ್ಷನ್ ಆಗೋದು ಗ್ಯಾರಂಟಿ. ಆದರೆ, ಇದು ಹೊಸ ಸಿನಿಮಾವಲ್ಲ, ರೀ-ರಿಲೀಸ್ ಸಿನಿಮಾ ಆಗಿರುವುದರಿಂದ ಕೊನೆ ಕ್ಷಣದ ಕ್ರೇಜ್ ಕೊಂಚ ಕಡಿಮೆ ಇರಬಹುದು. ಆದರೂ, ಮೊದಲ ದಿನ 10 ಕೋಟಿ ನೆಟ್ ಕಲೆಕ್ಷನ್ ಮಾಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಹೀಗಾದಲ್ಲಿ, ಭಾರತದಲ್ಲೇ ರೀ-ರಿಲೀಸ್ ಆದ ಯಾವುದೇ ಸಿನಿಮಾಗಿಂತ ಇದು ಅತ್ಯಂತ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಎನಿಸಿಕೊಳ್ಳಲಿದೆ.

2019ರಲ್ಲಿ ಬಂದಾಗ ‘ಎಂಡ್‌ಗೇಮ್‌’ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಹಾಲಿವುಡ್ ಸಿನಿಮಾ ಆಗಿತ್ತು. ಆ ಬಳಿಕ ‘ಅವತಾರ್: ದಿ ವೇ ಆಫ್ ವಾಟರ್’ ಹಾಗೂ ಇತ್ತೀಚೆಗೆ ಬಂದ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾಗಳು ಆ ದಾಖಲೆಯನ್ನು ಮುರಿದವು. ಆದರೀಗ ಈ ರೀ-ರಿಲೀಸ್ ಅಡ್ವಾನ್ಸ್ ಬುಕಿಂಗ್ ನೋಡ್ತಿದ್ರೆ, ‘ಎಂಡ್‌ಗೇಮ್’ ತನ್ನ ಹಳೆಯ ನಂಬರ್ 1 ಕಿರೀಟವನ್ನು ಮತ್ತೆ ತನ್ನದಾಗಿಸಿಕೊಳ್ಳುತ್ತಾ? ಅನ್ನೋ ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ.

ಮಧ್ಯದಲ್ಲಿ ಮಾರ್ವೆಲ್ ಸಿನಿಮಾಗಳ ಹವಾ ಕೊಂಚ ಕಮ್ಮಿ ಆಗಿತ್ತು. ಆದರೆ ಈ ರೀ-ರಿಲೀಸ್‌ಗೆ ಸಿಗುತ್ತಿರುವ ರಿಯಾಕ್ಷನ್ ನೋಡಿದರೆ, ಮಾರ್ವೆಲ್ ಬ್ರ್ಯಾಂಡ್‌ನ ಶಕ್ತಿ ಭಾರತದಲ್ಲಿ ಮತ್ತೆ ಎದ್ದು ನಿಂತಿದೆ. ಈ ವರ್ಷದ ಕೊನೆಯಲ್ಲಿ ಬರಲಿರುವ ‘ಅವೆಂಜರ್ಸ್: ಡೂಮ್ಸ್‌ಡೇ’ ಸಿನಿಮಾಗೆ ಈ ಕ್ರೇಜ್ ಭರ್ಜರಿ ಮುನ್ನುಡಿ ಬರೆದಂತಾಗಿದೆ. ಒಟ್ಟಿನಲ್ಲಿ, ಸೂಪರ್ ಹೀರೋಗಳ ಅಬ್ಬರಕ್ಕೆ ಇಂಡಿಯನ್ ಬಾಕ್ಸ್ ಆಫೀಸ್ ಮತ್ತೊಮ್ಮೆ ಶೇಕ್ ಆಗೋದಂತೂ ಪಕ್ಕಾ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !