ಮೊಟ್ಟೆಯು ಸಂಪೂರ್ಣ ಆಹಾರಕ್ಕೆ ಸಮವಾಗಿದೆ. ಇದು ಪ್ರೋಟೀನ್, 9 ಪ್ರಕಾರದ ಅಗತ್ಯ ಅಮೈನೋ ಆಮ್ಲಗಳು, ವಿಟಮಿನ್ ಬಿ, ಡಿ ಸೇರಿದಂತೆ ಇತರ ಪೋಷಕಾಂಶಗಳು ಸಮೃದ್ಧವಾಗಿವೆ.
ಪ್ರತಿದಿನ ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ವೈದ್ಯರು ಕೂಡ ಶಿಫಾರಸು ಮಾಡುತ್ತಾರೆ. ಕೆಲವರು ಬೆಳಗಿನ ಉಪಾಹಾರಕ್ಕಾಗಿ ಬೇಯಿಸಿದ ಮೊಟ್ಟೆಗಳನ್ನು ಸೇವಿಸಲು ತುಂಬಾ ಇಷ್ಟಪಡುತ್ತಾರೆ. ಕೆಲವು ಜನರು ಆಮ್ಲೆಟ್ ಅನ್ನು ತಿನ್ನಲು ಇಷ್ಟಪಡುತ್ತಾರೆ. ಬೇಯಿಸಿದ ಮೊಟ್ಟೆ ಅಥವಾ ಆಮ್ಲೆಟ್ ಸೇವಿಸಬೇಕಾ?
ಬೇಯಿಸಿದ ಮೊಟ್ಟೆ ಸೇವನೆ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯುನೈಟೆಡ್ ಸ್ಟೇಟ್ಸ್ ಕೃಷಿ ಇಲಾಖೆಯ ಪ್ರಕಾರ, ಬೇಯಿಸಿದ ಮೊಟ್ಟೆಯಲ್ಲಿ ಆರು ಗ್ರಾಂ ಉತ್ತಮ ಗುಣಮಟ್ಟದ ಪ್ರೋಟೀನ್ ಇರುತ್ತದೆ. ಇದು ಸ್ನಾಯುಗಳ ಬೆಳವಣಿಗೆಗೆ ತುಂಬಾ ಸಹಾಯಕವಾಗಿದೆ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು, ಜೊತೆಗೆ ವಿಟಮಿನ್ ಎ, ವಿಟಮಿನ್ ಡಿ ಹಾಗೂ ವಿಟಮಿನ್ ಬಿ12 ಸಮೃದ್ಧವಾಗಿದೆ. ಅವುಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿದೆ.
ಬೇಯಿಸಿದ ಮೊಟ್ಟೆಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ, ಪ್ರೋಟೀನ್ ಹಾಗೂ ಇತರ ಪೋಷಕಾಂಶಗಳಲ್ಲಿ ಅಧಿಕವಾಗಿರುತ್ತವೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ. ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪ್ರತಿದಿನ ಬೇಯಿಸಿದ ಮೊಟ್ಟೆಯನ್ನು ಸೇವಿಸುವುದರಿಂದ ತೂಕ ನಿಯಂತ್ರಿಸಬಹುದು.
ಆಮ್ಲೆಟ್ ಮೊಟ್ಟೆಗಳೊಂದಿಗೆ ತಯಾರಿಸಿದ ರುಚಿಕರ ಖಾದ್ಯವಾಗಿದೆ. ಅನೇಕ ಜನರು ಆಮ್ಲೆಟ್ ತಯಾರಿಸಲು ಹಸಿಮೆಣಸಿನಕಾಯಿ, ಅರಿಶಿನ, ಈರುಳ್ಳಿ ಮತ್ತು ಇತರ ತರಕಾರಿಗಳನ್ನು ಸೇರಿಸಿ ಆಮ್ಲೆಟ್ ತಯಾರಿಸುತ್ತಾರೆ. ಕೆಲವರು ಇದರೊಳಗೆ ಚೀಸ್ ಕೂಡ ಹಾಕುತ್ತಾರೆ.
ಈ ಎಲ್ಲಾ ಪದಾರ್ಥಗಳನ್ನು ತಯಾರಿಸುವುದರಿಂದ ರುಚಿ ಹೆಚ್ಚುತ್ತದೆ. ವಿಟಮಿನ್ಸ್, ಖನಿಜಗಳು ಹಾಗೂ ನಾರಿನ ಅಂಶವೂ ಹೆಚ್ಚು ಇರುತ್ತದೆ. ಎಣ್ಣೆ ಮತ್ತು ಚೀಸ್ ನಂತಹ ವಸ್ತುಗಳನ್ನು ಸೇರಿಸುವುದರಿಂದ ಕ್ಯಾಲೊರಿಗಳು ಹೆಚ್ಚಾಗುತ್ತವೆ. ಅನಾರೋಗ್ಯಕರ ಕೊಬ್ಬುಗಳು ದೇಹವನ್ನು ಸೇರಬಹುದು. ಅತಿಯಾದ ಕ್ಯಾಲೋರಿ ಸೇವನೆಯಿಂದ ಅನೇಕ ಆರೋಗ್ಯದ ಸಮಸ್ಯೆಗಳು ಉಂಟಾಗುತ್ತವೆ ಎಂದು ತಜ್ಞರು ತಿಳಿಸುತ್ತಾರೆ.