ಹೊಸ ದಿಗಂತ ವರದಿ, ಮಡಿಕೇರಿ:
ಮುಂಬರುವ ಬಜೆಟ್’ನಲ್ಲಿ ಕೊಡಗಿನ ರಸ್ತೆಗಳ ಅಭಿವೃದ್ಧಿಗೆ 100ಕೋಟಿ ರೂ.ಗಳನ್ನು ಮೀಸಲಿಡಬೇಕು ಮತ್ತು ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಶಾಸಕ ಕೆ.ಜಿ.ಬೋಪಯ್ಯ ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವ ಅವರು, 2008 ರಿಂದ 2013ರವರೆಗೆ ಇದ್ದ ಬಿಜೆಪಿ ಸರ್ಕಾರದಲ್ಲಿ ಮಂಡಿಸಲಾದ ಎಲ್ಲಾ ಮುಂಗಡ ಪತ್ರಗಳಲ್ಲಿ ಕೊಡಗು ಜಿಲ್ಲೆಯಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಅದೇ ರೀತಿ 2022-23ನೇ ಸಾಲಿನ ಮುಂಗಡ ಪತ್ರದಲ್ಲಿ ಕೊಡಗು ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗಾಗಿ ಕನಿಷ್ಟ 100 ಕೋಟಿ ಪ್ಯಾಕೇಜ್ ಮೀಸಲಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದರೊಂದಿಗೆ ಕೊಡವರ ಅಭಿವೃದ್ಧಿಗಾಗಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು, ಕ್ರೀಡಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಕೊಡಗಿನಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕು, ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮವಹಿಸಬೇಕು ಹಾಗೂ ನೂತನವಾಗಿ ರಚನೆಗೊಂಡ ಪೊನ್ನಂಪೇಟೆ ತಾಲೂಕಿಗೆ ಮಿನಿ ವಿಧಾನಸೌಧ ನಿರ್ಮಾಣ ಮಾಡಲು ರೂ.10 ಕೋಟಿ ಮೀಸಲಿಡಬೇಕು. 2022-23ನೇ ಸಾಲಿನ ಬಜೆಟ್‍ನಲ್ಲಿ ಈ ಎಲ್ಲಾ ಮನವಿಗೆ ಒತ್ತು ನೀಡಿ ಘೋಷಣೆ ಮಾಡಬೇಕೆಂದು ಪತ್ರದಲ್ಲಿ ಕೆ.ಜಿ.ಬೋಪಯ್ಯ ಉಲ್ಲೇಖಿಸಿದ್ದಾರೆ.