ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಘೋಷಣೆ ಬೆನ್ನಲ್ಲೇ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗಿತ್ತಿದ್ದು, ಬಣಗಳ ನಡುವೆ ತಿಕ್ಕಾಟಗಳು ಹೆಚ್ಚಾಗಿದೆ.
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಸಂಸದ ಶಶಿ ತರೂರ್ ಅಧ್ಯಕ್ಷ ಕಣದಲ್ಲಿದ್ದಾರೆ. ಇದರ ನಡುವೆ ರಾಹುಲ್ ಗಾಂಧಿ ಅಧ್ಯಕ್ಷರಾಗಬೇಕು ಅನ್ನೋ ಬಣವೂ ಹೆಚ್ಚಾಗಿದೆ. ಇವುಗಳ ಮದ್ಯೆ ಕಾಂಗ್ರೆಸ್‌ಗೆ ಬಂಡಾಯವೆದ್ದ ಜಿ23 ನಾಯಕರು ಹೊಸ ವಾರ್ನಿಂಗ್ ನೀಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಕೇವಲ ಹೆಸರಿಗೆ ಮಾತ್ರ ಆಗಬಾರದು. ಇಷ್ಟೇ ಅಲ್ಲ ಕಾಂಗ್ರೆಸ್ ಪಕ್ಷಕ್ಕೆ ಆಯ್ಕೆಯಾಗುವ ಅಧ್ಯಕ್ಷ ಪೂರ್ಣ ಪ್ರಮಾಣದ ಅಧ್ಯಕ್ಷನಾಗಿರಬೇಕು. ಅಲ್ಪಾವಧಿಗೆ ಅಧ್ಯಕ್ಷರನ್ನಾಗಿ ಮಾಡಬಾರದು ಎಂದು ಜಿ23 ನಾಯಕ ಪೃಥ್ವಿರಾಜ್ ಚೌವ್ಹಾಣ್ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಲು ಗಾಂಧಿ ನಾಯಕತ್ವದ ಹೊರತಾಗಿ ಸಮರ್ಥರ ಅಗತ್ಯವಿದೆ ಎಂದು ಜಿ23 ನಾಯಕರು ಈ ಹಿಂದೆ ಆಗ್ರಹಿಸಿದ್ದಾರೆ. ಇದೀಗ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಪಾರದರ್ಶಕವಾಗಿ ನಡೆಯಬೇಕು. ರಾಹುಲ್ ಗಾಂಧಿ ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ಸ್ವಾಗತಿಸುತ್ತೇವೆ. ಆದರೆ ಚುನಾವಣೆ ಇಲ್ಲದೆ ರಾಹುಲ್ ಗಾಂಧಿ ಅಧ್ಯಕ್ಷನಾಗಲಿ ಎಂದು ನಿರ್ಣಯ ಕೈಗೊಳ್ಳುವುದು ಸೂಕ್ತವಲ್ಲ ಎಂದು ಚವ್ಹಾಣ್ ಹೇಳಿದ್ದಾರೆ.
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಆದರೆ ಎರಡೆರಡು ಹುದ್ದೆಯಲ್ಲಿರುವುದಾದರೆ ಗೆಹ್ಲೋಟ್ ಬೆಂಬಲಿಸುವುದಿಲ್ಲ ಎಂದು ಚವ್ಹಾಣ್ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನಾಂಕಕಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಮತ್ತೆ ರಾಹುಲ್ ಗಾಂಧಿ ಅವರನ್ನೇ ಅಧ್ಯಕ್ಷ ಹುದ್ದೆಯಲ್ಲಿ ಕೂರಿಸಲು ಹಲವು ರಾಜ್ಯ ಘಟಕಗಳು ಬಹಿರಂಗವಾಗಿಯೇ ಒತ್ತಾಯ ಆರಂಭಿಸಿವೆ. ಜೊತೆಗೆ ಈ ಕುರಿತು ಗೊತ್ತುವಳಿಯನ್ನೇ ಅಂಗೀಕರಿಸಿವೆ. ಭಾರತ್ ಜೋಡೋ ಯಾತ್ರೆ ನಡೆಯುತ್ತಿರುವ ಹೊತ್ತಿನಲ್ಲೇ ಪಿ.ಚಿದಂಬರಂ, ಜೈರಾಮ್ ರಮೇಶ್ ಸೇರಿದಂತೆ ಹಲವು ನಾಯಕರು, ಯಾರು ನೂತನ ಅಧ್ಯಕ್ಷರಾದರೂ, ಪಕ್ಷದಲ್ಲಿ ರಾಹುಲ್ ಸ್ಥಾನಕ್ಕೆ ಯಾವುದೇ ಚ್ಯುತಿ ಇಲ್ಲ ಎಂಬ ಹೇಳಿಕೆಗಳ ನಡುವೆಯೇ ಇದೀಗ ರಾಜ್ಯ ಘಟಕಗಳಿಂದಲೂ ಇಂಥದ್ದೇ ಒತ್ತಾಯ, ಆಗ್ರಹ ಕೇಳಿಬಂದಿದೆ.